ನಿಯಮ ಉಲ್ಲಂಘಿಸಿ ಶಿಕ್ಷಕ ನೇಮಕ : ಕ್ರಮಕ್ಕೆ ಚನ್ನಬಸವ ಅರೋಲಿ ಒತ್ತಾಯ

ರಾಯಚೂರು,ನ.೯- ಮಾನವಿ ತಾಲೂಕಿನ ಅರೋಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಯ ಶರಬಸವ ಹಾಗೂ ಶಿಕ್ಷಕ ಶಂಕ್ರಪ್ಪ ಅವರು ಅಕ್ರಮವಾಗಿ ವಿಜ್ಞಾನ ಶಿಕ್ಷಕ ಶ್ಯಾಮರಾಜ್ ಇವರನ್ನು ನೇಮಕ ಮಾಡಿದ್ದಾರೆ ಎಂದು ಅರೋಲಿ ಗ್ರಾಮದ ನಿವಾಸಿ ಚನ್ನಬಸವ ಅರೋಲಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಸರ್ಕಾರದ ನಿಯಮಗಳನ್ನು ಪಾಲಿಸದೇ ತಮಗೆ ಬೇಕಾದ ಮನಸೋ ಇಚ್ಛೆ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.ಇದರಿಂದ ಮಕ್ಕಳ ಉನ್ನತ ಶಿಕ್ಷಣ ಕುಂಠಿತಗೊಂಡಿದೆ ಎಂದ ಅವರು,ಒಡೆಯರಾಜ್ ಎಂಬ ಬಿ.ಎ , ಬಿ.ಎಡ್ ಪದವೀಧರರ ಪ್ರಮಾಣ ಪತ್ರಗಳನ್ನು ಉಪಯೋಗಿಸಿಕೊಂಡು ಅಕ್ರಮವಾಗಿ ಒಡೆಯರಾಜ್ ಅವರ ಸ್ಥಾನದಲ್ಲಿ ವಿಜ್ಞಾನ ವಿಷಯದ ಅತಿಥಿ ಶಿಕ್ಷಕರಾಗಿ ಶ್ಯಾಮರಾಜ್ ಎಂಬುವವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಒಡೆಯರಾಜ್ ಎಂಬುವವರು ವರ್ಷದ ೩೬೫ ದಿನಗಳ ಕಾಲ ರಾಯಚೂರಿಗೆ ಬಂದು ತಮ್ಮ ವೈಯಕ್ತಿಕ ಕೆಲಸಗಳನ್ನು ಮುಗಿಸಿಕೊಂಡು ಅರೋಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಂಕ್ರಪ್ಪ ಇವರು ಸುಮಾರು ೨೦ ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಬೆಳಿಗ್ಗೆ ೧೦ ಗಂಟೆಗೆ ಶಾಲೆಗೆ ಬಂದು ಹಾಜರಾತಿ ಹಾಕಿ ತದನಂತರ ಯಾವುದೇ ತರಗತಿಯನ್ನು ನಿರ್ವಹಿಸದೇ ಅವರು ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಲು ತೆರಳಿ ಮತ್ತೆ ಸಂಜೆ ಶಾಲೆ ಬಿಡುವ ಸಮಯಕ್ಕೆ ಸರಿಯಾಗಿ ಬಂದು ಸಹಿ ಮಾಡಿ ಹೋಗುತ್ತಾರೆ ಎಂದು ದೂರಿದರು.
ಈ ಹಿಂದೆ ಶಾಲೆಯಲ್ಲಿ ಮಕ್ಕಳಿಗಾಗಿ ಇರುವ ಬಿಸಿಯೂಟದ ಯೋಜನೆಯಲ್ಲಿ ಬರುವ ಅಕ್ಕಿ,ಬೇಳೆ ಸೇರಿದಂತೆ ಇನ್ನಿತರ ಧಾನ್ಯಗಳನ್ನು ಅವರಿಗೆ ಬೇಕಾಗಿರುವಂತಹ ವ್ಯಕ್ತಿಗಳಿಗೆ ಮಾರಿಕೊಳ್ಳುತ್ತಿದ್ದದ್ದು ಕಂಡುಬಂದಿದ್ದು, ಅದನ್ನು ನೋಡಿ ಎಸ್‌ಡಿಎಂಸಿ ಸದಸ್ಯರು ಸೇರಿದಂತೆ ಅಧ್ಯಕ್ಷರು ಈ ಅಕ್ರಮ ದಂಧೆಯಲ್ಲಿ ಶಾಮೀಲಾಗಿದ್ದ ಪರಿಣಾಮ ಯಾವುದೇ ಕ್ರಮ ಕೈಗೊಂಡಿಲ್ಲ.ಆರೋಲಿ ಗ್ರಾಮದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶರಣಬಸವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶಂಕ್ರಪ್ಪ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದರೂ ಸಹ ಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ.ಕೂಡಲೇ ಮುಖ್ಯೋಪಾಧ್ಯಾಯ ಶರಣಬಸವ , ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಂಕ್ರಪ್ಪ ಪದವಿ ಪ್ರಮಾಣಪತ್ರಗಳನ್ನು ದುರುಪಯೋಗಪಡಿಸಿಕೊಳ್ಳಲು ನೀಡಿರುವ ಒಡೆಯರಾಜ್ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಮನವಿ ಮಾಡಿದರು.