ನಿಯಮ ಉಲ್ಲಂಘಿಸಿಲ್ಲ, ಕೊರೋನಾ ವಿಚಾರದಲ್ಲಿ ಪ್ರಮುಖರ ಸಭೆ: ಅಂಗಾರ ಕಡಬ: ಸೇವಾಭಾರತಿ ಸಭೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಆರೋಪ


ಕಡಬ, ಜೂ.೭- ಇಲ್ಲಿನ ಸರಸ್ವತಿ ವಿದ್ಯಾಲಯದಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಬಿಜೆಪಿ ಪ್ರವರ್ತಿತ ಸೇವಾ ಭಾರತಿಯ ಸಭೆ ನಡೆದಿದ್ದು, ಕೊವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ, ಆದರೆ ಈ ಆರೋಪವನ್ನು ಸಚಿವ ಎಸ್.ಅಂಗಾರ ಅವರು ಅಲ್ಲಗಳೆದಿದ್ದು ಕೊರೋನಾ ವಿಚಾರವಾಗಿ ತುರ್ತು ಪ್ರಮುಖರ ಸಭೆ ನಡೆಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಜೂ.೬ರಂದು ಕಡಬದ ಸರಸ್ವತೀ ವಿದ್ಯಾಲಯದಲ್ಲಿ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಸಭೆ ನಡೆಸಿದ್ದು ಈ ಸಭೆಗೆ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವರದಿ ಪ್ರಸಾರವಾಗಿತ್ತು. ಈ ಸಭೆಯು ಖಾಸಗಿಯಾಗಿದ್ದು ಮಾದ್ಯಮದವರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಘಟನೆಯ ಬಗ್ಗೆ ವರದಿಗೆ ತೆರಳಿದ್ದ ವರದಿಗಾರರು ವೀಡಿಯೋ ಮಾಡುತ್ತಿದ್ದಾಗ ಇದಕ್ಕೆ ಕಾರ್ಯಕರ್ತರಿಂದ ಆಕ್ಷೇಪವೂ ವ್ಯಕ್ತವಾಯಿತು. ಮಾತಿನ ಚಕಮುಖಿಯು ನಡೆಯಿತು. ಸಭೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಸಭಾಂಗದಲ್ಲಿ ಸಾಮಾಜಿಕ ಅಂತರವಿದ್ದರೂ, ಸಭೆ ಮುಗಿದ ಬಳಿಕ ಮತ್ತು ಆರಂಭದಲ್ಲಿ ಗುಂಪು ಗುಂಪಾಗಿ ಸೇರಿದ್ದರು. ಸಾಮಾಜಿಕ ಅಂತರಕ್ಕೆ ಮಾನ್ಯತೆಯಿರಲಿಲ್ಲ.