ಬ್ಯಾಡಗಿ,ಜೂ12: ಕೀಲು ಸಂಬಂಧಿ ಯಾವುದೇ ಸಮಸ್ಯೆಗಳು ಕಂಡು ಬಂದ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೇ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಮೂಳೆ ಸಮಸ್ಯೆ, ಕೀಲು ನೋವಿನಿಂದ ಬಳಲುತ್ತಿರುವವರಿಗೆ ಸುಧಾರಿತ ವೈದ್ಯಕೀಯ ಕ್ಷೇತ್ರದಲ್ಲಿ ಪರಿಹಾರವಿದೆ ಎಂದು ಎಲುಬು ಮತ್ತು ಕೀಲು ತಜ್ಞ ಡಾ. ವಿನಾಯಕ ಹಿರೇಗೌಡರ ಸಲಹೆ ನೀಡಿದರು.
ಪಟ್ಟಣದ ಸ್ನೇಹಸದನ ಸಮಗ್ರ ಸಮಾಜ ಕಾರ್ಯನಿರ್ವಹಣಾ ಕೇಂದ್ರದಲ್ಲಿ ರೋಟರಿ ಕ್ಲಬ್ ಬ್ಯಾಡಗಿ ಹಾಗೂ ರಾಣೆಬೆನ್ನೂರಿನ ಶಿವಂ ಹಿರೇಗೌಡರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಎಲುಬು, ಕೀಲು ಮತ್ತು ಚರ್ಮರೋಗ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಂಕ್ ಆಹಾರ ಸೇವನೆ, ದೈಹಿಕ ಚಟುವಟಿಕೆ ಇಲ್ಲದ ಜೀವನಶೈಲಿ, ಏರುತ್ತಿರುವ ಬೊಜ್ಜು, ಒತ್ತಡದ ಬದುಕು, ಗಂಟೆಗಟ್ಟಲೇ ಕೂತು ಕೆಲಸ ಮಾಡುವುದರಿಂದ ಮೂಳೆ ಮತ್ತು ಕೀಲು ಸಂಬಂಧಿತ ಕಾಯಿಲೆಗಳು ಬಾಧಿಸುತ್ತವೆ. ಆರಂಭದಲ್ಲೇ ವೈದ್ಯರನ್ನು ಭೇಟಿಯಾಗಿ, ನಿಯಮಿತ ಆರೋಗ್ಯ ತಪಾಸಣೆ, ಅಗತ್ಯ ಚಿಕಿತ್ಸೆ ಪಡೆಯುವುದರಿಂದ ಮೂಳೆ ಸಂಬಂಧಿತ ಕಾಯಿಲೆಗಳನ್ನು ದೂರವಿಡಬಹುದು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಉಪ್ಪಾರ ಮಾತನಾಡಿ, ಈ ಶಿಬಿರದಲ್ಲಿ ಬ್ಲಡ್ ಪ್ರೆಷರ್ ಪರೀಕ್ಷೆ, ಕ್ಯಾಲ್ಸಿಯಂ ಸಾಂದ್ರತೆ ಪ್ರಮಾಣದ ಪರೀಕ್ಷೆ, ಬೋನ್ ಡೆನ್ಸಿಟಿ ಪ್ರಮಾಣದ ಪರೀಕ್ಷೆ, ಎಲುಬು, ಕೀಲು ಜಾಯಿಂಟ್ ಪೇನ ತೊಂದರೆಗಳಿಗೆ ಫಿಜಿಯೋಥೆರಪಿ ವಿಧಾನಗಳ ಬಗ್ಗೆ ಹಾಗೂ ಚರ್ಮರೋಗಕ್ಕೆ ಚಿಕಿತ್ಸಾ ಔಷಧಗಳ ಸಲಹೆಗಳನ್ನು ಉಚಿತವಾಗಿ ನೀಡಲಿದ್ದು, ಆರ್ಥಿಕವಾಗಿ ಹಿಂದುಳಿದವರು ಇಂತಹ ಶಿಬಿರಗಳಲ್ಲಿ ಬಂದು ಉಚಿತವಾಗಿ ತಪಾಸಣೆ ಮಾಡಿಸಿಕೊಂಡು ಶಿಬಿರದ ಲಾಭ ಪಡೆದುಕೊಳ್ಳಲು ಮನವಿ ಮಾಡಿದರಲ್ಲದೇ, ಶಿಬಿರದಲ್ಲಿ ಬ್ಯಾಡಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 240ಕ್ಕೂ ಜನ ತಪಾಸಣೆ ಮಾಡಿಸಿಕೊಂಡಿದ್ದು, ಎಲುಬು, ಕೀಲು ತೊಂದರೆ ಇರುವ ರೋಗಿಗಳಿಗೆ ಕೆಲ ಔಷಧಿಗಳನ್ನು ಉಚಿತವಾಗಿ ನೀಡಲಾಯಿತು ಮತ್ತು ವಸತಿ ಶಾಲೆಯಲ್ಲಿರುವ 45 ವಿದ್ಯಾರ್ಥಿಗಳು ಸಹ ತಪಾಸಣೆ ಮಾಡಿಸಿಕೊಂಡು ಉಚಿತವಾಗಿ ಔಷಧಗಳನ್ನು ಪಡೆದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚರ್ಮರೋಗ ತಜ್ಞರಾದ ಡಾ.ಶ್ವೇತಾ ಹಿರೇಗೌಡರ, ಆಸ್ಪತ್ರೆಯ ಸಿಬ್ಬಂದಿಗಳು, ಸ್ನೇಹ ಸದನದ ನಿರ್ದೇಶಕಿ ಸಿಸ್ಟರ್ ಗ್ಲೋರಿಯಾ, ಸಿಸ್ಟರ್ ರೂಪ, ಕ್ಲಬ್ ಸದಸ್ಯರಾದ ಪವಾಡಪ್ಪ ಆಚನೂರ, ಮಹಾಂತೇಶ ಬಂದಮ್ಮನವರ, ಸುಭಾಶ ಕುರುಕುಂದಿ, ಸತೀಶ ಅಗಡಿ, ಸುರೇಶ ಗೌಡರ, ವಿಶ್ವನಾಥ ಅಂಕಲಕೋಟಿ, ಮಾಲತೇಶ ಉಪ್ಪಾರ, ಅನಿಲಕುಮಾರ ಬೊಡ್ಡಪಾಟಿ, ದೇವರಾಜ ಹುಡೇದ, ಎಸ್ ಎನ್ ನಿಡಗುಂದಿ, ಲಿಂಗಯ್ಯ ಹಿರೇಮಠ, ಲಕ್ಷ್ಮಿ ಉಪ್ಪಾರ ಜಯಾ ಪಟ್ಟಣಶೆಟ್ಟಿ, ಪ್ರತಿಭಾ ಮೇಲಗಿರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು