ನಿಯಮಾನುಸಾರ ಜಾಹೀರಾತು ರೂಪಿಸಿ, ಪ್ರಾಮಾಣೀಕರಣ ಪಡೆದುಕೊಳ್ಳಲು ಸಲಹೆ

ಚಿತ್ರದುರ್ಗ.ಏ.೧೬; ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆ ಆಯೋಗ ರೂಪಿಸಿರುವ ನಿಯಮ ಹಾಗೂ ಮಾನದಂಡ ಪಾಲಿಸಿ, ಜಾಹೀರಾತುಗಳನ್ನು ರೂಪಿಸಿ ಜಿಲ್ಲಾ ಎಂ.ಸಿ.ಎಂ.ಸಿ (ಮಾಧ್ಯಮ ಪ್ರಮಾಣೀಕರಣ ಹಾಗೂ ನಿಗಾ ಸಮಿತಿ) ಪ್ರಮಾಣೀಕರಣವನ್ನು ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಮಾಧ್ಯಮ ದೃಢೀಕರಣ ಮತ್ತು ಮೇಲ್ವಿಚಾರಣಿ ಸಮಿತಿ ಅಧ್ಯಕ್ಷರಾದ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನಲೆಯಲ್ಲಿ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ವಿದ್ಯುನ್ಮಾನ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರ ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಹಮ್ಮಿಕೊಂಡಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವ ರಾಜಕೀಯ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಮುದ್ರಣ ಮಾಧ್ಯಮದ ಮೂಲಕ ಪ್ರಸಾರ ಮಾಡುವ ಜಾಹೀರಾತುಗಳಿಗೆ ಪ್ರಾಮಾಣೀಕರಣದ ಅವಶ್ಯಕತೆ ಇಲ್ಲ. ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾದ ಜಾಹೀರಾತು ಆ ಪತ್ರಿಕೆಯ ಆನ್‍ಲೈನ್ ಸಂಚಿಕೆಯಲ್ಲಿಯೂ ಪ್ರಕಟವಾಗುವಂತಿದ್ದರೆ ಅಂತಹ ಜಾಹೀರಾತುಗಳಿಗೂ ಮಾಧ್ಯಮ ಪ್ರಮಾಣೀಕರಣ ಕಡ್ಡಾಯವಾಗಿದೆ. ಮತದಾನದ ಮುಕ್ತಾಯಕ್ಕೆ ನಿಗದಿಪಡಿಸಿದ ಸಮಯದ ಪೂರ್ವದ 48 ಗಂಟೆಗಳ ಅವಧಿಯಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಚುನಾವಣೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಬಿತ್ತರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ಈ ಅವಧಿಯಲ್ಲಿ ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸಲು ಪ್ರಾಮಾಣೀಕರಣ ಕಡ್ಡಾಯವಾಗಿದೆ ಎಂದು ತಿಳಿಸಿದರು.