ನಿಯಮಾನುಸಾರ ಕರ್ತವ್ಯ ನಿರ್ವಹಿಸಿ: ಸಲಗಾರ

ಬಸವಕಲ್ಯಾಣ:ಮೇ.27: ‘ಗ್ರಾಮ ಪಂಚಾಯಿತಿ ಗಳಲ್ಲಿ ಬೋಗಸ್ ಕೆಲಸ ನಡೆದರೆ ಸಹಿಸಲಾಗದು. ತಮ್ಮ ಅಧಿಕಾರದ ಇತಿಮಿತಿ ಅರಿತು, ನಿಯಮಾನುಸಾರ ಹಾಗೂ ನಿಗದಿತ ಅವಧಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸಬೇಕು’ ಎಂದು ಶಾಸಕ ಶರಣು ಸಲಗರ ಖಡಕ್ ಎಚ್ಚರಿಕೆ ನೀಡಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ವಿಧಾನಸಭಾ ಕ್ಷೇತ್ರದ ಬಸವಕಲ್ಯಾಣ ಹಾಗೂ ಹುಲಸೂರ ತಾಲ್ಲೂಕುಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಇಡೀ ವಿಶ್ವವೇ ಒಪ್ಪಿದಂಥ ಮಹಾತ್ಮ ಗಾಂಧೀಜಿಯವರ ಹೆಸರಲ್ಲಿ ಉದ್ಯೋಗ ಖಾತರಿ ಯೋಜನೆಯಿದೆ. ಅಲ್ಲದೆ ಇದು ಕಾಯಕದ ಮಹತ್ವ ಸಾರಿದ ಬಸವಣ್ಣನವರ ನೆಲವಿದ್ದು, ಯಾರಿಗೂ ಅಪಚಾರವಾಗದಂತೆ ಕೆಲಸ ನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳು ಕೆಲ ಸದಸ್ಯರನ್ನು ಬೆನ್ನಹಿಂದೆ ಕಟ್ಟಿಕೊಂಡು ತಮಗೆ ಬೇಕಾದಂತೆ ವರ್ತಿಸುತ್ತಿದ್ದಾರೆ.ಮೊದಲಿರುತ್ತಿದ್ದ ಕಾರ್ಯದರ್ಶಿಗಳು ಸರಿ ಇದ್ದರು. ಈಗ ಇರುವ ಉನ್ನತ ವಿದ್ಯೆ ಪಡೆದ ಅಭಿವೃದ್ಧಿ ಅಧಿಕಾರಿಗಳಿಗೆ ವಿಕಾಸದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಜನಸಾಮಾನ್ಯರು ಆಡಿಕೊಳ್ಳುತ್ತಿದ್ದಾರೆ. ಕೋವಿಡ್ ಯಾರನ್ನೂ ಬಿಡುತ್ತಿಲ್ಲ. ಹೆಂಡತಿ, ಮಕ್ಕಳಿಗೆ ಮುಖ ತೋರಿಸದಂಥ ಪರಿಸ್ಥಿತಿಯಿದೆ. ಆದ್ದರಿಂದ ಸ್ವಾರ್ಥ ಬಿಟ್ಟು ನ್ಯಾಯ, ನೀತಿ ಅನುಸರಿಸಿ ಮಾನವೀಯ ಮೌಲ್ಯಗಳ ಪರಿಪಾಲಕ ರಾಗಿ ಕಾರ್ಯಗೈಯಬೇಕು’ ಎಂದು ಸಲಹೆ ನೀಡಿದರು.
‘ಉದ್ಯೋಗ ಖಾತರಿಯಲ್ಲಿ ಹತ್ತಾರು ಕೆಲಸ ನಿರ್ವಹಿಸಬಹುದು. ಅಂಗನವಾಡಿಗಳಲ್ಲಿ ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಾಸಕ್ಕೆ ಪ್ರೇರಕವಾದ ವಾತಾವರಣ ಮತ್ತು ವ್ಯವಸ್ಥೆ ಇರಬೇಕು. ನಾನು ಶಾಸಕನಾದ ಮರುದಿನದಿಂದ ನಗರದಲ್ಲಿನ ಸ್ವಚ್ಛತಾ ಅಭಿಯಾನ ಆರಂಭಿಸಿದ್ದೇನೆ. ಅದರಂತೆ ಪ್ರತಿ ಊರು ಕೂಡ ಮಳೆಗಾಲ ಪೂರ್ವದಲ್ಲಿ ಸ್ವಚ್ಛವಾಗಬೇಕು’ ಎಂದು ಸೂಚಿಸಿದರು.

‘ನಾನು ಆಗಾಗ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ನಮ್ಮ ಹಿಂದೆ ಉನ್ನತ ಅಧಿಕಾರಿ, ದೊಡ್ಡ ರಾಜಕಾರಣಿಗಳ ಅಭಯಹಸ್ತವಿದ್ದು ಯಾರೂ ಏನೂ ಮಾಡಲಾರರು ಎಂದು ಭಾವಿಸಿದರೆ ನಡೆಯದು. ನಿವು ಕೈಗೊಂಡ ಉತ್ತಮ ಕೆಲಸವೇ ನಿಮ್ಮನ್ನು ಉಳಿಸಬಲ್ಲದು. ಶಾಸಕರನ್ನೂ ಪ್ಯಾಕ್ ಮಾಡಬಹುದು ಎಂದು ಯಾರಾದರೂ ತಪ್ಪು ತಿಳಿದುಕೊಂಡರೆ ಖಂಡಿತವಾಗಿಯೂ ಸಂಕಟ ಅನುಭವಿಸುತ್ತೀರಿ’ ಎಂದು ಎಚ್ಚರಿಕೆ ನೀಡಿದರು.

ಶಾಸಕರ ಆಗ್ರಹದ ಮೇರೆಗೆ ಮಂಠಾಳ ಹಾಗೂ ಹುಲಸೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಪಂಚಾಯಿತಿಗಳಿಗೆ ಗಾಂಧಿಗ್ರಾಮ ಪುರಸ್ಕಾರ ಏಕೆ ಬಂತು ಎಂಬುದನ್ನು ವಿವರಿಸಿದರು.

ಭಾವುಕರಾದ ಪಿಡಿಒ: ‘ಮೋರಖಂಡಿಯಲ್ಲಿ ಸಸಿ ನೆಡುವಿಕೆಗೆ ಸಂಬಂಧಿಸಿದಂತೆ ಹಣ ಪಾವತಿ ಆಗಿರುವುದರಲ್ಲಿ ನನ್ನ ಪಾತ್ರವಿಲ್ಲ. ನನ್ನ ಮೇಲೆ ಆರೋಪ ಹೊರಿಸಬೇಡಿ’ ಎಂದು ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಭೆಯಲ್ಲಿ ಕಣ್ಣೀರು ತಂದು ಭಾವುಕರಾಗಿ ಕೇಳಿಕೊಂಡ ಪ್ರಸಂಗ ಜರುಗಿತು.

ಕೆಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಖಾತರಿ ಯೋಜನೆಯಲ್ಲಿ ಯಾವ್ಯಾವ ಕೆಲಸಗಳನ್ನು ಕೈಗೊಳ್ಳಬಹುದು ಎಂಬುದರ ಮಾಹಿತಿ ನೀಡಿದರು.

ತಹಶೀಲ್ದಾರ್ ಸಾವಿತ್ರಿ ಸಲಗರ, ತಾಲ್ಲೂಕು ಪಂಚಾಯಿತಿ ಇಒ ಬೀರೇಂದ್ರಸಿಂಗ್ ಠಾಕೂರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.