ನಿಯಮಗಳ ಬದ್ಧತೆಯಿಂದ ಪಾಲಿಸಲು ಕರೆ

ದಾವಣಗೆರೆ.ಏ.೨೯; ಸರಕಾರ ಹಾಗೂ ಆರೋಗ್ಯ ಇಲಾಖೆ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ಕೊರೋನಾ ಸಾಂಕ್ರಾಮಿಕ ರೋಗವನ್ನು ಹೊಡೆದೋಡಿಸಲು ಸಾಧ್ಯ. ಮಾಸ್ಕ್ ಧರಿಸುವುದು, ಆಗಾಗ ಸಾನಿಟೈಸರ್ ಮೂಲಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ  ನಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಮಲಿನಗೊಳಿಸದೇ ಸ್ವಚ್ಛವಾಗಿರಿಸಿಕೊಳ್ಳುವುದು ನಾಗರಿಕರ ಬಹುಮುಖ್ಯ ಕರ್ತವ್ಯವಾಗಿದೆ. ನಾವೂ ಆರೋಗ್ಯವಾಗಿರಬೇಕು ಮತ್ತು ನಮ್ಮ ಸುತ್ತಮುತ್ತಲಿನವರೂ ಆರೋಗ್ಯವಾಗಿರಬೇಕು. ಇದಕ್ಕಾಗಿ ಸರಕಾರ ಸೂಚಿಸುವ ಪ್ರತಿಯೊಂದು ನಿಯಮಗಳನ್ನು ಬದ್ಧತೆಯಿಂದ ಪಾಲಿಸಿದಾಗ ಮಾತ್ರ ನಾವು ಕೊರೋನಾ ವಿರುದ್ಧ ಹೋರಾಡಲು ಸಾಧ್ಯ  ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶಣೈಯವರು ಅಭಿಪ್ರಾಯಪಟ್ಟರು. ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ ಹಾಗೂ ಶ್ರೀ ಸಿದ್ಧಗಂಗಾ ಮಕ್ಕಳ ಲೋಕ ಸಾಂಸ್ಕೃತಿಕ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಕೊರೋನಾ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಾಲಿಗ್ರಾಮ ಗಣೇಶ್ ಶಣೈಯವರು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೊರೋನಾ ಜಾಗೃತಿ ಮೂಡಿಸಿದರು.ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ 76 ನೇ ಸ್ಥಾಪನಾ ದಿನದ ಅಂಗವಾಗಿ ದಾವಣಗೆರೆ ನಿಟುವಳ್ಳಿಯ ಶ್ರೀ ಸಿದ್ಧಗಂಗಾ ಮಕ್ಕಳ ಲೋಕ ಸಾಂಸ್ಕೃತಿಕ ಸಂಸ್ಥೆಯ 50 ವಿದ್ಯಾರ್ಥಿಗಳಿಗೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ವತಿಯಿಂದ ಮಾಸ್ಕ್ ಹಾಗೂ ಸಾನಿಟೈಸರ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಿದ್ದಗಂಗಾ ಮಕ್ಕಳ ಲೋಕದ ಪ್ರಾಂಶುಪಾಲೆ ಸಿ.ಕೆ.ರುದ್ರಾಕ್ಷಿಬಾಯಿ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ. ಸಾಮಾನ್ಯ ಕುಟುಂಬದ ಹಿನ್ನಲೆಯಿಂದ ಬಂದಂತಹ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಸಾನಿಟೈಸರ್ ವಿತರಿಸುವ ಜೊತೆಗೆ ಕೊರೋನಾ ಜಾಗೃತಿ ಮೂಡಿಸುವ ಕೆಲಸ ಮಾಡಿ ಇತರೇ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ. ಯಾರೊಬ್ಬರೂ ಉದಾಸೀನ ಮಾಡದೆ ಬದ್ಧತೆಯಿಂದ ಸರಕಾರದ ಜೊತೆ ಸಹಕರಿಸಿ ಕೊರೋನಾ ವಿರುದ್ಧ ಹೋರಾಡಬೇಕು ಎಂದರು.ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷರಾದ ಬಿ.ಆನಂದಮೂರ್ತಿ ಮಾತನಾಡಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘವು ಕಳೆದ 75 ವರ್ಷಗಳಿಂದ ಬ್ಯಾಂಕ್ ಉದ್ಯೋಗಿಗಳ ಶ್ರೇಯಸ್ಸಿಗಾಗಿ ಶ್ರಮಿಸುವುದು ಮಾತ್ರವಲ್ಲದೇ ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿದೆ. 1946ರಲ್ಲಿ ಉದಯವಾದ ಸಂಘವು 75 ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ಮುಂದೆ ಒಂದು ವರ್ಷ ಪೂರ್ತಿ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷರಾದ  ಬಿ.ಆನಂದಮೂರ್ತಿ, ಉಪಾಧ್ಯಕ್ಷರಾದ  ಆರ್. ಆಂಜನೇಯ, ಪ್ರಧಾನ ಕಾರ್ಯದರ್ಶಿ ಕೆ‌.ರಾಘವೇಂದ್ರ ನಾಯರಿ, ಕಾರ್ಯದರ್ಶಿ ಹೆಚ್.ಎಸ್.ತಿಪ್ಪೇಸ್ವಾಮಿ, ಖಜಾಂಚಿ  ಕೆ.ವಿಶ್ವನಾಥ್ ಬಿಲ್ಲವ ಹಾಗೂ ಕೇಂದ್ರ ಸಮಿತಿ ಸದಸ್ಯರಾದ  ರಮೇಶ್,  ಕೆ‌.ಶಶಿಶೇಖರ್  ಉಪಸ್ಥಿತರಿದ್ದರು.