ನಿಯಮಗಳನ್ನು ಪಾಲಿಸಿ ಶಾಂತಿಯುತ ಚುನಾವಣೆಗೆ ಸಹಕರಿಸಲು ಮನವಿ


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.31 :- 2023ರ ವಿಧಾನಸಭಾ ಚುನಾವಣೆ ನೀತಿಸಂಹಿತೆ ಬುಧವಾರದಿಂದ ಪ್ರಾರಂಭವಾಗಿದ್ದು  ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಲ್ಲಾ ಪಕ್ಷದ ಮುಖಂಡರಿಗೆ ಕೂಡ್ಲಿಗಿ ವಿಧಾನಸಭಾ ಚುನಾವಣಾಧಿಕಾರಿ ಈರಪ್ಪ ಬಿರಾದಾರ ತಿಳಿಸಿದರು.
ಅವರು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ  ಎಲ್ಲಾ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡುತ್ತಾ  ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ನಿಯಮಾವಳಿಗಳನ್ನು ಮಾಡಿದ್ದು, ಅದರನ್ವಯ ಎಲ್ಲಾ ಪಕ್ಷಗಳು ಮತ್ತು ಅಭ್ಯರ್ಥಿಗಳು ಯಾವುದೇ ಸಭೆ, ಸಮಾರಂಭ ಮಾಡುವುದಿದ್ದರೆ ಮುಂಚಿತವಾಗಿ ಚುನಾವಣಾಧಿಕಾರಿಗಳ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಅಲ್ಲದೆ, ಕ್ಷೇತ್ರದಲ್ಲಿ ಗ್ರಾಮೀಣ 219, ನಗರ 26 ಹಾಗೂ ಕ್ರಿಟಿಕಲ್ 56 ಸೇರಿ ಒಟ್ಟು 245 ಮತಕೇಂದ್ರಗಳಿವೆ. 1,02,554 ಪುರುಷರು, 99,463 ಮಹಿಳೆಯರು ಹಾಗೂ ಇತರೆ 14 ಸೇರಿ ಒಟ್ಟು 2,02,031 ಮತದಾರರಿದ್ದಾರೆ. ಅಕ್ರಮ ತಡೆಯಲು ಗೋವಿಂದಗಿರಿ, ಡಿ.ಸಿದ್ದಾಪುರ, ಕೊಂಬಿಹಳ್ಳಿ, ಹೊಸಹಳ್ಳಿ ಹಾಗೂ ಉಜ್ಜಿನಿ ಭಾಗದಲ್ಲಿ 5 ಚೆಕ್ ಪೋಸ್ಟ್ ಗಳಿವೆ ಇವುಗಳಿಗೆ  ಅಗತ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ. 80ವರ್ಷ ಮೇಲ್ಪಟ್ಟವರು 3264 ಮಂದಿ ಕ್ಷೇತ್ರದಲ್ಲಿದ್ದು ಅವರ ಅನುಮತಿಯಂತೆ ಅವರಿದ್ದ ಮನೆಯಿಂದ ಮತದಾನ ಮಾಡಲು ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಅವಕಾಶ ನೀಡಿದೆ. ಕೂಡ್ಲಿಗಿ ಕ್ಷೇತ್ರದಲ್ಲಿ 2864ಗಂಡು ಹಾಗೂ 2466ಹೆಣ್ಣು ಹಾಗೂ 1ಇತರೆ ಸೇರಿ 5331 ಯುವ ಮತದಾರರಿದ್ದಾರೆ  ಕ್ಷೇತ್ರದಲ್ಲಿ ಚುನಾವಣೆಗಾಗಿ ಅಗತ್ಯ ಸಿದ್ಧತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ಕೂಡ್ಲಿಗಿ ತಹಸೀಲ್ದಾರ್ ಟಿ.ಜಗದೀಶ್, ಕೂಡ್ಲಿಗಿ ಕ್ಷೇತ್ರದ ಪೊಲೀಸ್ ನೋಡಲ್ ಅಧಿಕಾರಿ ಕೂಡ್ಲಿಗಿ ಸಿಪಿಐ ವಸಂತ ವಿ.ಅಸೋದೆ, ಹೊಸಪೇಟೆ ಆರ್ ಟಿ ಓ ಮಂಜುನಾಥ ಸೇರಿ ಚುನಾವಣಾ ಸಿಬ್ಬಂದಿ ಈಶಪ್ಪ, ಶಿವುಕುಮಾರ  ಹಾಗೂ  ಕಾಂಗ್ರೆಸ್ ಮುಖಂಡರಾದ ಕಾವಲಿ  ಶಿವಪ್ಪನಾಯಕ, ಜಿಲಾನ್, , ಜೆಡಿಎಸ್ ಬ್ಯಾಳಿ ವಿಜಯಕುಮಾರ ಗೌಡ, ಕಾಲ್ಚೆಟ್ಟಿ ಈಶಪ್ಪ, ಸಿಪಿಐ ಪಕ್ಷದ ಕರಿಯಪ್ಪ, ಬಿಜೆಪಿಯ ವಾಗೀಶ್ ಮೂರ್ತಿ ಇತರರಿದ್ದರು.