ನಿಯಂತ್ರಣ ತಪ್ಪುತ್ತಿರುವ ಬೆಲೆ ಏರಿಕೆ ತಡೆಗೆ ಸರ್ಕಾರಕ್ಕೆ ಸಿರಗಾಪೂರ ಆಗ್ರಹ

ಕಲಬುರಗಿ:ಆ.10: ಬೆಲೆ ಏರಿಕೆ ಸರ್ಕಾರದ ನಿಯಂತ್ರಣ ಕೈ ತಪ್ಪುತ್ತಿದೆ.ಜನರ ಮೇಲೆ ಬೆಲೆ ಏರಿಕೆ ಬರೆ ಹಾಕುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ತಡೆಗಟ್ಟಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ದಿನ ನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ.ಕಿರಾಣಾ ದಿನಿಸಿಗಳು, ಕಾಯಿಪಲ್ಲೆ,ಬೆಳೆ ಕಾಳುಗಳು ಸೇರಿದಂತೆ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.ಜನಸಾಮಾನ್ಯರು ಇದರಿಂದ ಬೇಸತ್ತಿದ್ದಾರೆ.ಟೋಮೆಟೋ, ಉಳ್ಳಾಗಡ್ಡಿ, ಬೇಳೆಕಾಳುಗಳು ಖರೀದಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಚುನಾವಣೆ ಪೂರ್ವ ಭರವಸೆ ನೀಡಿದ್ದ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಮಾಡಿ ಬರೆ ಹಾಕುವ ಕೆಲಸ ಮಾಡುತ್ತಿದೆ.ಉಚಿತ ವಿದ್ಯುತ್ ನೀಡುವುದಾಗಿ ಹೇಳಿ ಧೀಡಿರನೆ ವಿದ್ಯುತ್ ಯುನಿಟ್ ಎರಡು ಪಟ್ಟು ಹೆಚ್ಚಳ ಮಾಡಲಾಗಿದೆ.ಹಾಲು ಮಾರಾಟಗಾರ ರೈತರಿಗೆ ಬೆಂಬಲ ಬೆಲೆ ನೀಡುವ ನೆಪದಲ್ಲಿ ಪಾಕೇಟ್ ಹಾಲು ಮತ್ತು ಮೊಸರು ದರ 3 ರಿಂದ 4 ರೂಪಾಯಿಗೆ ಹೆಚ್ಚು ಮಾಡಿದ್ದು ಗ್ರಾಹಕರಿಗೆ ಹೊಡೆತ ಬಿದ್ದಿದೆ.ರೈತರ ಮೇಲೆ ಕಾಳಜಿ ಇದ್ದರೆ ಹಾಲು ಉತ್ಪಾದಿಸುವ ರೈತರಿಗೆ ಸರ್ಕಾರದ ಖಜಾನೆಯಿಂದ ಹಣ ನೀಡಬೇಕು ಎಂದು ಅವರು ಹೇಳಿದರು.

ಮುಂಗಾರು ಮಳೆ ವಿಳಂಬದಿಂದಾಗಿ ಮುಂಗಾರು ಬೆಳೆಗಳು ಬಾರದೆ ಇರುವುದರಿಂದ ರೈತರು ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ.ಪ್ರತಿ ಎಕರೆಗೆ 25 ಸಾವಿರ ರೂ ಪರಿಹಾರ ನೀಡಬೇಕು.ಅಲ್ಲದೆ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಅವರು ಒತ್ತಾಯಿಸಿದ್ದಾರೆ.