ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ನಿಂತ ಲಾರಿ : ಸಂಚಾರಕ್ಕೆ ವಾಹನಗಳ ಪರದಾಟ

ರಾಯಚೂರು,ಜು.೨೬- ನಗರಕ್ಕೆ ಸಂಪರ್ಕ ಕಲ್ಪಿಸುವ ರಾಯಚೂರು-ಲಿಂಗಸ್ಗೂರು ರಸ್ತೆಯಲ್ಲಿ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ನಿಂತ ಪರಿಣಾಮ ಸಂಚಾರಕ್ಕೆ ಅಡ್ಡಿಯುಂಟಾಗಿ, ವಾಹನ ಸವಾರರು ಗಂಟೆಗಟ್ಟಲೆ ಪರದಾಡುವಂತಾಯಿತು. ನಸುಕಿನ ಜಾವ ಈ ಘಟನೆ ಸಂಭವಿಸಿದ್ದು, ಮಳೆ ಹಾಗೂ ಕೆಸರಿನ ವಾತಾವರಣದಿಂದಾಗಿ ಲಾರಿ ಅರ್ಧದಷ್ಟು ರಸ್ತೆ ಪಕ್ಕದ ಗುಂಡಿಗೆ ಕುಸಿದು, ಅಲುಗಾಡಲಾಗದೇ ಅಲ್ಲೇ ನಿಂತಿತ್ತು. ಸ್ಥಳಕ್ಕೆ ಆಗಮಿಸದ ಪೊಲೀಸರು ವಾಹನ ದಟ್ಟಣೆಯನ್ನು ನಿಯಂತ್ರಿಸಲು ಉಳಿದ ಸಣ್ಣ ಜಾಗದಲ್ಲೇ ಕಿರು ವಾಹನಗಳ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಬಳಿಕ ಜೆಸಿಬಿ ಸಹಾಯದಿಂದ ಲಾರಿಯನ್ನು ಪಕ್ಕಕ್ಕೆ ಸರಿಸಿ, ಸಂಚಾರಕ್ಕೆ ದಾರಿಮಾಡಿಕೊಡಲಾಯಿತು.