ನಿಯಂತ್ರಣ ಕೊಠಡಿಗೆ ವೆಚ್ಚ ವೀಕ್ಷಕರ ಭೇಟಿ ಪರಿಶೀಲನೆ

ಬಾಗಲಕೋಟೆ,ಏ.16 : ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಗೆ ಆಗಮಿಸಿರುವ ವೆಚ್ಚ ವೀಕ್ಷಕರಾದ ಮದುಸೂಧನ ಟಿ.ವಿ, ರಥೀನ್ ಚಾಕ್ಲದಾರ್, ಸತೀಶ ನಾನಾಜಿ ವಾಸನಿಕ್, ವಿಶಾಲ್ ಚೌಧರಿ ಅವರು ಜಿಲ್ಲಾಡಳಿತ ಭವನದಲ್ಲಿ ಸ್ಥಾಪಿಸಲಾದ ಜಿಲ್ಲಾ ನಿಯಂತ್ರಣ ಕೊಠಡಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ನಿಯಂತ್ರಣ ಕೋಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಚೆಕ್‍ಪೋಸ್ಟಗಳ ಮೇಲೆ ಕಣ್ಗಾವಲು, ಸಿ-ವಿಜಿಲ್ ಆ್ಯಪ್ ಮೂಲಕ ಮತ್ತು ಸಹಾಯವಾಣಿ ಸಂಖ್ಯೆ 1950ಗೆ ಕರೆಗಳ ಮೂಲಕ ದೂರು ಸ್ವೀಕಾರ, ವಿದ್ಯುನ್ಮಾನ, ಮುದ್ರಣ ಮಾದ್ಯಮ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಪರಿಶೀಲನೆ ಕಾರ್ಯ, ಎಫ್‍ಎಸ್‍ಟಿ ತಂಡಗಳ ವಾಹನಗಳ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಕಾರ್ಯಗಳನ್ನು ವೀಕ್ಷಿಸಿದರು.
ಇದಕ್ಕೂ ಪೂರ್ವದಲ್ಲಿ ಜಿಲ್ಲಾಡಳಿತ ಭವನದಲ್ಲಿ ಚುನಾವಣಾ ವೆಚ್ಚಗಳ ಕುರಿತು ಜರುಗಿದ ಸಭೆಯಲ್ಲಿ ವೆಚ್ಚ ವೀಕ್ಷಕರು ಮಾತನಾಡಿ, ಚುನಾವಣಾ ಮಾದರಿ ನೀತಿ ಸಂಹಿತೆ ಪಾಲನೆ ಜೊತೆಗೆ ಅಧಿಕಾರಿಗಳು ಪಕ್ಷಾತೀತವಾಗಿ ಹಾಗೂ ಯಾರಿಗೂ ಸಂಶಯ ಬಾರದಂತೆ ಪ್ರಾಮಾಣಿಕವಾಗಿ ಚುನಾವಣಾ ಕಾರ್ಯ ಮಾಡತಕ್ಕದ್ದು. ಯಾವುದೇ ಸಮಸ್ಯೆಗಳಿದ್ದರೆ ಜಿಲ್ಲಾ ಚುನಾವಣಾಧಿಕಾರಿಗಳನ್ನು ಹಾಗೂ ತಮ್ಮನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ, ಜಿ.ಪಂ ಸಿಇಓ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಯುಕೆಪಿ ಮಹಾವ್ಯವಸ್ಥಾಪಕ ಭಂವರ ಸಿಂಗ್ ಮೀನಾ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಕನಿಷ್ಕ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಆಯಾ ಮತಕ್ಷೇತ್ರದ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಅಬಕಾರಿ ಉಪ ಆಯುಕ್ತರು, ಚುನಾವಣಾ ವೆಚ್ಚಗಳ ನೋಡಲ್ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.