ನಿಯಂತ್ರಣದತ್ತ ಮಹಾಮಾರಿ ಕರೊನಾ

ಬಾಬುಅಲಿ ಕರಿಗುಡ್ಡ
ದೇವದುರ್ಗ.ನ.೫-ಮಹಾಮಾರಿ ಕರೊನಾ ವೈರಸ್, ನಿಧಾನವಾಗಿ ಇಳಿಮುಖವಾಗುತ್ತಿದ್ದು, ತಾಲೂಕಿನಲ್ಲಿ ಆರೋಗ್ಯ ಇಲಾಖೆ ನಿಯಂತ್ರಣಕ್ಕೆ ಸಿಗುತ್ತಿದೆ.
ಜಿಲ್ಲೆಯಲ್ಲಿ ಮೊದಲ ಬಾರಿ ತಾಲೂಕಿನಲ್ಲಿ ಕೋವಿಡ್-೧೯ ಕೇಸ್ ಪತ್ತೆಯಾಗಿತ್ತು. ಇದು ಜನರಿಗೆ ಮಾತ್ರವಲ್ಲ ಅಧಿಕಾರಿ ವರ್ಗದ ಆತಂಕಕ್ಕೆ ಕಾರಣವಾಗಿತ್ತು. ೬ತಿಂಗಳ ನಂತರ ತಾಲೂಕಿನಲ್ಲಿ ವೈರಸ್ ಹರಡುವಿಕೆ ಪ್ರಮಾಣ ಕಡಿಮೆಯಾಗುವ ಜತೆಗೆ ಗುಣಮುಖರಾಗುವವರ ಸಂಖ್ಯೆಕೂಡ ಹೆಚ್ಚಾಗಿದೆ. ಇದರಿಂದ ತಾಲೂಕಿನ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ತಾಲೂಕು ಬಹುತೇಕ ಹಿಂದುಳಿದ ಪ್ರದೇಶವಾಗಿದ್ದರಿಂದ ಆರ್ಥಿಕವಾಗಿ ಹಿಂದುಳಿದವರು, ಕೂಲಿಕಾರರು ಪುಣೆ, ಮುಂಬೈ ಸೇರಿ ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೆ ಗುಳೆ ಹೋಗಿದ್ದರು. ಲಾಕ್‌ಡೌನ್‌ನಿಂದ ಬಹುತೇಕರು ಮರಳಿ ವಾಪಸ್ ಆಗಿದ್ದರು. ವಾಪಸ್ ಬರುವವರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ತಾಲೂಕು ಆಡಳಿತ ಕರೊನಾ ತಡೆಗೆ ಕ್ವಾರಂಟೈನ್ ಕೇಂದ್ರ ತೆರೆದಿತ್ತು.
ತಾಲೂಕಾದ್ಯಂತ ವಿವಿಧ ಹಾಸ್ಟೆಲ್‌ಗಳಲ್ಲಿ ೧೬ಕ್ವಾರಂಟೈನ್ ಕೇಂದ್ರ ತೆರೆದು ಸುಮಾರು ೨೫ಸಾವಿರಕ್ಕೂ ಹೆಚ್ಚು ಕೂಲಿಕಾರರನ್ನು ೧೪ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಮೇನಲ್ಲಿ ೩ಪಾಸಿಟಿವ್ ಪತ್ತೆಯಾಗಿದ್ದವು. ಅಲ್ಲಿಂದ ವೈರಸ್ ತನ್ನ ಅಟ್ಟಹಾಸ ಮೆರೆದು ಜಿಲ್ಲೆಯಲ್ಲೇ ಅತ್ಯಧಿಕ ಕೇಸ್‌ಗಳು ಪತ್ತೆಯಾಗಿದ್ದವು. ದಿನಕ್ಕೆ ೧೦೦ಕ್ಕೂ ಹೆಚ್ಚು ಕೇಸ್‌ಗಳು ಪತ್ತೆಯಾಗಿದ್ದವು. ಎಲ್ಲಿ ಆರೋಗ್ಯ ಇಲಾಖೆ ನಿಯಂತ್ರಣಕ್ಕೆ ಸಿಗದೆ ಕೈತಪ್ಪಲಿದೆ ಎನ್ನುವ ಆತಂಕ ಮನೆ ಮಾಡಿತ್ತು. ಇದನ್ನೇ ಸವಾಲ್ ಆಗಿ ಪರಿಗಣಿಸಿದ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿವೆ.
ರೋಗ ನಿರೋಧಕ ಶಕ್ತಿ ಹೆಚ್ಚಳ:
ತಾಲೂಕಿನಲ್ಲಿ ಈವರೆಗೆ ೧೫೯೬ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ೧೫೩೫ರೋಗಿಗಳು ಗುಣಮುಖರಾಗಿದ್ದಾರೆ. ಸದ್ಯ ೪೨ಸಕ್ರಿಯ ಪ್ರಕರಣಗಳಿದ್ದು, ಕರೊನಾ ಜತೆಗೆ ನಾನಾ ಕಾಯಿಲೆಯಿಂದ ಬಳುತ್ತಿದ್ದ ೧೯ರೋಗಿಗಳು ಮೃತಪಟ್ಟಿದ್ದಾರೆ. ಮೇನಲ್ಲಿ ೧೯೬ ಪ್ರಕರಣ, ಜೂನ್‌ನಲ್ಲಿ ೧೪೯, ಜುಲೈನಲ್ಲಿ ೮೯ ಪ್ರಕರಣಗಳು ಪತ್ತೆಯಾಗಿದ್ದರೆ, ೩ತಿಂಗಳು ಯಾವುದೇ ಸಾವು ಕಂಡುಬಂದಿರಲಿಲ್ಲ. ಆಗಷ್ಟನಲ್ಲಿ ೪೨೬ಪ್ರಕರಣ ಪತ್ತೆಯಾಗಿ, ೭ಜನರು ಮೃತಪಟ್ಟಿದ್ದರು. ಸೆಪ್ಟೆಂಬರ್‌ನಲ್ಲಿ ೫೬೧ಪ್ರಕರಣ ಪತ್ತೆಯಾಗಿ ೯ಜನರು ಮೃತಪಟ್ಟಿದ್ದರು. ಅಕ್ಟೋಬರ್‌ನಲ್ಲಿ ೧೩೨ಪ್ರಕರಣ ಪತ್ತೆಯಾದರೆ ಇಬ್ಬರು ಮೃತಪಟ್ಟಿದ್ದರು. ತಾಲೂಕು ಪ್ರದೇಶ ಹಿಂದುಳಿದರೂ ಇಲ್ಲಿನ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಕಾರಣ ಶೇ.೯೦ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ೪೨ಸಕ್ರಿಯ ಪ್ರಕರಣಗಳಿದ್ದು, ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೋಟ್=======

ತಾಲೂಕಿನಲ್ಲಿ ಕರೊನಾ ವೈರಸ್ ನಿಯಂತ್ರಣದಲ್ಲಿದ್ದು, ೪೨ಸಕ್ರಿಯ ಪ್ರಕರಣಗಳಿವೆ. ೧೫೯೫ಜನರಿಗೆ ಪಾಸಿಟಿವ್ ಕಂಡಬಂದಿದ್ದು, ೧೫೩೫ರೋಗಿಗಳು ಗುಣಮುಖರಾಗಿದ್ದಾರೆ. ತಾಲೂಕು ಆಡಳಿತದ ಸಲಹೆ, ಸಿಬ್ಬಂದಿ, ಅಧಿಕಾರಿಗಳ ಶ್ರಮದಿಂದ ರೋಗ ನಿಯಂತ್ರಣಕ್ಕೆ ಬರುತ್ತಿದೆ.
ಡಾ.ಬನದೇಶ್ವರ
ತಾಲೂಕು ವೈದ್ಯಾಧಿಕಾರಿ