ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ದಿನೇ ದಿನೆ ವಾಂತಿಭೇದಿ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುರುವಾರ 7 ಜನರ ವಾಂತಿಭೇದಿ ಪ್ರಕರಣ ವರದಿಯಾಗಿತ್ತು. ಈ ಮಧ್ಯೆ ಭಾನುವಾರ ಮತ್ತೆ 7ಜನ, ಹಾಗೂ ಸೋಮವಾರ ಸಿದ್ದಮ್ಮ(20), ಸನ್ನಿಧಿ(10), ಗಜ್ಜೆಪ್ಪ(45), ಲಚ್ಚಪ್ಪ(36), ಲಕ್ಷಿ(14), ಲಕ್ಮೀ(40) 6 ಜನ ವಾಂತಿಭೇದಿಯಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
18ನೇ ವಾರ್ಡಿನ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲಾಗಿದ್ದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸಾರ್ವಜನಿಕರ ಮನೆಗಳಿಗೆ ತೆರಳಿ ಕಾದಾರಿಸಿದ ನೀರು ಇಲ್ಲವೆ ಶುದ್ಧ ಕುಡಿಯುವ ನೀರನ್ನು ಬಳಸಲು ಸೂಚಿಸಿದರು.
ಪಟ್ಟಣ ಪಂಚಾಯಿತಿಗೆ ಭೇಟೆ ನೀಡಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಯಾವ ಪರ್ಯಾಯ ಕ್ರಮ ಕೈಗೊಂಡಿದ್ದೀರಿ, ಎಷ್ಟು ನೀರಿನ ಟ್ಯಾಂಕರ್ ಗಳನ್ನು ಬಿಡಲಾಗಿದೆ ಹಾಗೂ ಕುಡಿಯಲು ಯೋಗ್ಯವಲ್ಲದ ಏಳು ನೀರಿನ ಓವರ್ ಹೆಡ್ ಟ್ಯಾಂಕ್ಗಳಿದ್ದು ಎಷ್ಟು ಸುದ್ಧೀಕರಣ ಗೊಳಿಸಿದ್ದೀರಿ ಎಂದು ಎಂಜನಿಯರ್ ಸುನಂದ ಅವರನ್ನು ಪ್ರಶ್ನಿಸಿದರು.
ಶೀಘ್ರದಲ್ಲಿ ಟೆಂಡರ್ ಕರೆದು ಒವರ್ ಹೆಡ್ ಟ್ಯಾಂಕರ್ ಗಳನ್ನು ಸ್ವಚ್ಛಗೊಳಿಸುವುದಾಗಿ ತಿಳಿಸಿದ ಎಂಜನಿಯರ್ ಸುನಂದ ಮಾತಿಗೆ ಡಾ. ಮರಿಯಂಬಿ ಬೇಸರ ವ್ಯಕ್ತಪಡಿಸಿದರು.
ಸಾಂಕ್ರಾಮಿಕ ರೋಗ ಶಾಸ್ತ್ರಜ್ಞೆ ಡಾ. ಪ್ರಿಯಾಂಕ, ತಾಲ್ಲೂಕು ವೈದ್ಯಾಧಿಕಾರಿ ಡಾ. ಡಿ. ಬಿ ಈರಣ್ಣ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿನೇಶ, ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಮಹಮ್ಮದ್ ಖಾಸಿಂ, ಭೀಮರಾಜ್, ವಿಜಯ ಕುಮಾರ್, ಕಲರಾ ನಿಯಂತ್ರಣ ತಂಡದ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಇದ್ದರು.
ಪಟ್ಟಣದಲ್ಲಿ 86 ಕೊಳವೆ ಬಾವಿಗಳಿದ್ದು, ಆರೋಗ್ಯ ಇಲಾಖೆಯಿಂದ ನಡೆಸಲಾದ 7 ಬೋರ್ ವೆಲ್ ಗಳ ನೀರಿನ ಜೈವಿಕ ಪರೀಕ್ಷಾ ವರದಿಯಲ್ಲಿ 6ಬಳಕೆಗೆ ಯೋಗ್ಯವಾಗಿವೆ, ಉಳಿದ 80 ಕೊಳವೆ ಬಾವಿಗಳ ಜೈವಿಕ ಪರೀಕ್ಷೆಗೆ ಶೀಘ್ರವೇ ಕಳುಹಿಸಲಾಗುವುದು.
– ಬಿ. ಈರಣ್ಣ ಮುಖ್ಯಾಧಿಕಾರಿ ತೆಕ್ಕಲಕೋಟೆ