ನಿಮ್ಹಾನ್ಸ್ ಅವ್ಯವಸ್ಥೆ ಶಾಸಕರ ಅಸಮಾಧಾನ

ಬೆಂಗಳೂರು, ಸೆ. ೧೫- ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿನ ಚಿಕಿತ್ಸೆಯ ಅವ್ಯವಸ್ಥೆಯ ಬಗ್ಗೆ ವಿಧಾನಸಭೆಯಲ್ಲಿಂದು ಆಡಳಿತಾರೂಢ ಪಕ್ಷದ ಶಾಸಕರೇ ಅಸಮಾಧಾನ ಹೊರ ಹಾಕಿದ ಪ್ರಸಂಗ ನಡೆಯಿತು.
ಶೂನ್ಯ ವೇಳೆಯ ನಂತರ ಬಿಜೆಪಿಯ ಹಾಲಪ್ಪ ಅವರು ನಿಮ್ಹಾನ್ಸ್‌ನಲ್ಲಿ ತಮ್ಮ ಕ್ಷೇತ್ರದ ಒಬ್ಬರಿಗೆ ವೆಂಟಿಲೇಟರ್ ಸಿಗದೇ ಇರುವ ಬಗ್ಗೆ ಮಾತನಾಡಲು ಮುಂದಾಗುತ್ತಿದ್ದಂತೆಯೇ ಸಭಾಧ್ಯಕ್ಷರು ಕುಳಿತುಕೊಳ್ಳಿ, ನಿಮಗೆ ಅವಕಾಶ ಕೊಟ್ಟಿಲ್ಲ ಎಂದು ಹೇಳಿದ್ದು ಹಾಲಪ್ಪನವರ ಸಿಟ್ಟಿಗೆ ಕಾರಣವಾಗಿ, ನಾನು ಸಮಸ್ಯೆ ಹೇಳುವುದೇ ಬೇಡ ಎನ್ನುವುದಾದರೆ ಹೇಳುವುದೇ ಇಲ್ಲ ಎಂದು ಕೈಯಲ್ಲಿದ್ದ ಹೆಡ್‌ಫೋನ್‌ನನ್ನು ಟೇಬಲ್‌ಗೆ ಬಡಿದು ಅಸಮಾಧಾನ ಹೊರ ಹಾಕಿದರು.
ಆಗ ಆಡಳಿತ ಪಕ್ಷದ ಕೆಲ ಸದಸ್ಯರುಗಳು ಹರತಾಳು ಹಾಲಪ್ಪನವರ ಬೆಂಬಲಕ್ಕೆ ನಿಂತು ನಿಮ್ಹಾನ್ಸ್‌ನ ಅವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಲು ಅವಕಾಶ ಕೊಡಿ, ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಒತ್ತಾಯಿಸಿದರು.
ಸಭಾಧ್ಯಕ್ಷರು ವಿಷಯ ಪ್ರಸ್ತಾಪಕ್ಕೆ ಅವಕಾಶ ಕೊಡುತ್ತಿದ್ದಂತೆಯೇ ಮಾತನಾಡಿದ ಹಾಲಪ್ಪ ಅವರು, ನಮ್ಮ ಕ್ಷೇತ್ರದ ವ್ಯಕ್ತಿಯೊಬ್ಬರನ್ನು ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ಕರೆದೊಯ್ದಾಗ ವೆಂಟಿಲೇಟರ್ ಇಲ್ಲ ಎಂದು ಕಳುಹಿಸಿದ್ದಾರೆ. ಹೀಗಾದರೆ ಹೇಗೆ ಶಾಸಕರ ಮಾತಿಗೂ ಕಿಮ್ಮತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ಪ್ರಸ್ತಾಪಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಮ್ಹಾನ್ಸ್‌ನ ನಿರ್ದೇಶಕರಿಗೆ ಮಾತನಾಡಿ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು.