ನಿಮ್ಮ ಸಾಮಥ್ರ್ಯದ ಮೇಲೆ ನಂಬಿಕೆ ಇಟ್ಟು, ಆತ್ಮ ವಿಶ್ವಾಸದಿಂದ ಅಭ್ಯಾಸ ಮಾಡಿ: ಡಾ. ನಿಷ್ಠಿ

ಕಲಬುರಗಿ:ಮೇ.21: ವಿದ್ಯಾರ್ಥಿಗಳು ತಮ್ಮ ಸಾಮಥ್ರ್ಯದ ಮೇಲೆ ನಂಬಿಕೆ ಇಟ್ಟು ಆತ್ಮ ವಿಶ್ವಾಸದಿಂದ ಅಭ್ಯಾಸ ಮಾಡಿದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದೆಂದು ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನ್ ವಿ ನಿಷ್ಠಿ ಕರೆ ನೀಡಿದರು.
ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ರವಿವಾರದಂದು ಆಯೋಜಿಸಿದ ಇಂಜಿನಿಯರಿಂಗ್ ಕೋರ್ಸ್‍ಗಳಿಗೆ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಶ್ರಮಪಟ್ಟು ಓದಿದರೆ ಭಾರತವು ಎಲ್ಲದರಲ್ಲಿಯೂ ಮಂಚೂಣಿಯಲ್ಲಿರಲು ಯಾವುದೇ ಸಂಶಯವಿಲ್ಲ. ಪ್ರತಿ ವಿದ್ಯಾರ್ಥಿಯ ಸಾಧನೆ, ವಿಶ್ವವಿದ್ಯಾಲಯದ ಸಾಧನೆ. ಅಧ್ಯಯನ ಮಾಡುವುದರಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗಿಳಿಯಬೇಕೆಂದು ಕಿವಿಮಾತನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಮಾತನಾಡಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಏಲ್ಲಾ ಅನುಕೂಲಕರ ವಾತಾವರಣವಿದ್ದು, ಓದಿನ ಕಡೆ ಹೆಚ್ಚಿನ ಗಮನ ಕೊಡಲು ಹುರಿದುಂಬಿಸುತ್ತದೆ.
ಪೂಜ್ಯ ಡಾ. ಅಪ್ಪಾಜಿಯವರು ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಆ್ಯಂಡ್ ಡಾಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಆ್ಯಂಡ್ ಮಷೀನ್ ಲರ್ನಿಂಗ್ ನಂತಹ ಹೊಸ ಕೋರ್ಸ್‍ಗಳು ಪರಿಚಯಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರ್ಯಾಂಕ್‍ನಲ್ಲಿ ತೇರ್ಗಡೆಯಾದ ಮೊದಲನೇಯ ವರ್ಷದ ವಿದ್ಯಾರ್ಥಿಗಳಿಗೆ ಹಾಗೂ ಆಯಾ ವಿಭಾಗದ ಮುಖ್ಯಸ್ಥರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಬಸವರಾಜ ಮಠಪತಿ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ, ಹಣಕಾಸು ಅಧಿಕಾರಿ ಪ್ರೊ. ಕಿರಣ ಮಾಕಾ, ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಡೀನ್ ಡಾ. ಶಿವಕುಮಾರ ಜವಳಗಿ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರೊ. ಶೃತಿ ನಿರೂಪಿಸಿ ವಂದಿಸಿದರು.