ನಿಮ್ಮ ಮಾತೃಭಾಷೆ ಯಾವುದೇ ಇರಲಿ! ಆದರೆ ನಿಮಗೆ ನೆಲ ಜಲ ಅನ್ನ ನೀಡಿರುವ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನವಿರಲಿ

ಪ್ರೀತಿಯ ಮಕ್ಕಳೇ,,,, 

 ಸ್ವಚ್ಛತೆ ಎಂಬುದು ಬರೀ ಬಾಹ್ಯ ಆವರಣಕ್ಕೆ ಮಾತ್ರ ಸೀಮಿತ ಅಲ್ಲ ! ಅದು ಅಂತರಂಗದ ಸಂಸ್ಕಾರದ ಬೆಳಕು ಕೂಡ ! ಬಿಂಬ ಪ್ರತಿಬಿಂಬದಂತೆ  ಅವುಗಳ ಪ್ರಕ್ರಿಯೆ!   ಮನಸ್ಸು ಶುದ್ಧವಾಗಿದ್ದರೆ ಸಾಕಾರ ಆಲೋಚನೆಗಳಿಂದ ತುಂಬಿಕೊಂಡಿದ್ದರೆ ಮನುಷ್ಯ ವಿಕಾರ ಆಗಲ್ಲ! ಮನುಷ್ಯ ಸಾಕಾರ ಚಿಂತನೆಗಳನ್ನು ಹೊಂದಿದ್ದರೆ ಮಾತ್ರ ತನ್ನ ಬದುಕನ್ನು ಶುದ್ಧವಾಗಿ ಕಟ್ಚಿಕೊಳ್ಳಬಹುದು. ಅಂತಹ ಸಾಕಾರ ಚಿಂತನೆಗಳು ನಿಮ್ಮಲ್ಲಿ ಮೂಡಬೇಕು ಎಂದರೆ,,, ತರಗತಿಯಲ್ಲಿ ಶಿಸ್ತಿನಿಂದ ಕುಳಿತುಕೊಂಡು ಶಿಕ್ಷಕರು ಹೇಳಿಕೊಡುವ  ಪಾಠವನ್ನು ಏಕಾಗ್ರತೆಯಿಂದ ಆಲಿಸಬೇಕು.ಉತ್ತಮವಾಗಿ  ಪಾಠ ಆಲಿಸುವುದಕ್ಕೆ ಗುರು ಹಿರಿಯರನ್ನು ಗೌರವಿಸುವ ವಿಧೇಯತೆ , ವಿನಯವಂತಿಕೆ ಶ್ರದ್ಧೆ ನಿಷ್ಠೆಯ ಸಂಸ್ಕಾರದ ನಡೆ ಇರಬೇಕು.ಅಂತೆಯೇ ತರಗತಿ ಕೋಣೆ, ಶಾಲಾ ಆವರಣ ಕೂಡ ಸ್ವಚ್ಛವಾಗಿರಿಸಬೇಕು. ಕಸಕೊಳೆಯನ್ನು ಪರಿಸರಕ್ಕೆ ಚೆಲ್ಲದೆ, ಪರಿಸರದಲ್ಲಿ ಇರುವ ಕೊಳೆ ತೊಳೆಯುವ ಮನೋಭಾವವನ್ನು ನಡೆಯಾಗಿಸಿಕೊಳ್ಳಬೇಕು! ಅಂತೆಯೇ ಮನಸ್ಸನ್ನು  ಕೊಳೆ ಮಾಡುವ ಗುಣಗಳಾದ ಅವಿಧೇಯತೆ, ಅಸಡ್ಡೆ, ಅಶಿಸ್ತಿನ ಮಾತು, ಸೋಮಾರಿತನ, ವಿಕಾರ ಆಸೆಗಳು, ಭೇದಭಾವದ ಕೀಳು ನಡೆ ,   ಅಹಂಕಾರಗಳನ್ನು ಬಿಟ್ಟು ಸಹಕಾರ ಸಹಬಾಳ್ವೆಯಲ್ಲಿ ನಡೆಯಬೇಕು. ಶುದ್ಧ ಸಂಸ್ಕೃತಿಯ ಆಚಾರ ವಿಚಾರಗಳಿಂದ ಮಾತ್ರ ಮನುಷ್ಯ ಜ್ಞಾನಿಯಾಗಬಹುದು; ಕಲಿತ ಜ್ಞಾನವನ್ನು ವಿವೇಕ ಪ್ರಜ್ಞೆಯಿಂದ ಜವಾಬ್ದಾರಿತನದಿಂದ  ಬಳಸಿ ನಿಮ್ಮ ಜೀವನವನ್ನು ನೀವೇ ಕಟ್ಟಿಕೊಳ್ಳಬೇಕು. ಇಂತಹ ಕಟ್ಟುವಿಕೆಗೆ ಸಾಕಾರ ನಡೆಗೆ ನೀವು ಆರೋಗ್ಯಪೂರ್ಣವಾಗಿರುವುದಕ್ಕೆ ನೀವು ತಿನ್ನುವ ಆಹಾರ ಪೌಷ್ಠಿಕವಾಗಿರುವುದು ಕೂಡ  ತುಂಬಾ ಅವಶ್ಯ.ಆಹಾರವನ್ನು ಮನುಷ್ಯತ್ವದಿಂದ ಹಂಚಿ ತಿನ್ನುವಂತಹ ವ್ಯವಸ್ಥೆಯನ್ನು  ನಮ್ಮ ಇಲಾಖೆ, ವಿದ್ಯೆ ಕಲಿಯಲು ಹಸಿವು ತೊಡಕಾಗಬಾರದೆಂದು ನಿಮಗಾಗಿ ಮಾಡಿದೆ.  ಅದಕ್ಕಾಗಿ ನಮ್ಮ ಘನ  ಸರ್ಕಾರ, ಶಾಲಾ ಶಿಕ್ಷಣ  ಇಲಾಖೆ  ನಿಮಗಾಗಿ ಕೋಟಿಗಟ್ಟಲೇ  ಹಣವನ್ನು ಖರ್ಚು ಮಾಡುತ್ತಿದೆ. ಉಚಿತ ಪುಸ್ತಕ, ಉಚಿತ ಬಟ್ಟೆ, ಹೈಟೆಕ್ ರೂಮ್ ಗಳು, ಹೈಟೆಕ್ ಶೌಚಾಲಯ ನೀಡಿರುವಂತೆ  ಬಿಸಿಯೂಟ, ಚಿಕ್ಕಿ ,ಹಾಲು,ಮೊಟ್ಟೆ ಬಾಳೆಹಣ್ಣು, ರಾಗಿ ಮಾಲ್ಟ್  ಮೊದಲಾದ ಪೌಷ್ಠಿಕ ಆಹಾರವನ್ನು ಒದಗಿಸುತ್ತಿದೆ. ಅದನ್ನು ಉಂಡು,ಚನ್ನಾಗಿ ಓದಿ ನಿಮ್ಮ ಬದುಕನ್ನು ಬೆಳಗಿಸಿಕೊಳ್ಳಿ.ಪ್ರಕೃತಿ ಜೊತೆಯಲ್ಲೆ ಬೆಳೆಯುವ ನಮಗೆ ಪ್ರಕೃತಿ ಗುಣಗಳೇ  ಇರಬೇಕು! ಹೊರತಾದರೆ ತಾಮಸ ರೂಪ ಪ್ರಕೃತಿಯನ್ನೇ ಹಾಳು ಮಾಡುತ್ತದೆ! ಅಂತಹ ಅರಿವು ನಮಗಾಗಲು ನಾವು ನಮ್ಮ ಮನೋವಿಕಾಸಕ್ಕಾಗಿ ಓದಬೇಕು. ಜ್ಞಾನ ಸಂಸ್ಕೃತಿಯಿಂದ ಮಾತ್ರ ನಾವು ಒಳಿತಾಗಿ ಬದುಕಿ, ಒಳಿತನ್ನೇ ಬಿತ್ತಲು ಸಾಧ್ಯ!ಬದುಕನ್ನು ಸಕಾರಾತ್ಮಕವಾಗಿ ಕಟ್ಟಿಕೊಳ್ಳುವಾಗ ಪ್ರೌಢಾವಸ್ಥೆಯಲ್ಲಿ ಆಗುವ ದೈಹಿಕ ಮಾನಸಿಕ ಬದಲಾವಣೆಗಳಿಗೆ ನೀವು ಭಯಪಡಬಾರದು. ಗೊಂದಲಗಳಿದ್ದರೆ ಆತಂಕಗಳಿದ್ದರೆ ತಾಯಿ ತಂದೆ ಗುರುಗಳ ಹತ್ತಿರ ಹೇಳಿಕೊಂಡು  ಸಮಸ್ಯೆ ಪರಿಹರಿಸಿಕೊಳ್ಳಬೇಕು.ನಾಚಿಕೆ,ಭಯದಿಂದ ಮುಚ್ಚಿಟ್ಟು ತೊಂದರೆ ಪಟ್ಕೋಬೇಡಿ.ನೀವು ಬಳಸುವ ಶಾಲಾ ಶೌಚಾಲಯಗಳನ್ನು ನಿಮ್ಮ ಮನೆಯ ಶೌಚಾಲಯಗಳಂತೆ ಸ್ವಚ್ಛವಾಗಿಡಲು ಎಲ್ಲರೂ ಕೈಜೋಡಿಸಬೇಕು. ತರಗತಿಯಲ್ಲಿ ಕಸ ಆಗದಂತೆ ನೋಡಿ ಕೊಳ್ಳಬೇಕು.ನಿರ್ಮಲವಾಗಿದ್ದಷ್ಟೂ  ಕಲಿಯಲು ಆಸಕ್ತಿ ಬರುತ್ತದೆ.ಅಂತೆಯೇ ಈ ವಯೋಮಾನದಲ್ಲಿ ಪರಸ್ಪರ ಲಿಂಗಾಕರ್ಷಣೆ ಜಾಸ್ತಿ. ಅದಕ್ಕೆ ಒಳಗಾಗಿ ವಿಕಾರವಾಗಬೇಡಿ. ನಿಮ್ಮ ಅಪ್ಪ ಅಮ್ಮನ ಗೌರವ, ಶಾಲಾ ಗೌರವ ನಿಮ್ಮ ಜೀವನ ನೆಮ್ಮದಿ ನಿಮ್ಮ ಶೀಲವಂತಿಕೆಯ ನಡೆಯಲ್ಲಿದೆ. ಲಿಂಗಾಕರ್ಷಣೆಯಿಂದ ಕೆಟ್ಟ ಆಲೋಚನೆಗೆ ಒಳಗಾಗಿ ದಾರಿ ತಪ್ಪಬೇಡಿ. ಶಾಲಾ ಕಾರ್ಯಕ್ರಮಗಳಿಗೆ ಸಭ್ಯವಾದ ಉಡುಪು ಧರಿಸಿಕೊಂಡು ಬನ್ನಿ. ಗುರುಗಳ ನಿಯಂತ್ರಣದಲ್ಲಿ ಇರಿ. ಹುಡುಗರ ಜೊತೆ ಸೆಲ್ಫಿ ಅಂತ ಅಸಭ್ಯ ರೀತಿಯ ಭಂಗಿಯಲ್ಲಿ  ಫೋಟೋ  ತೆಗೆದು,,, ನಾಳಿನಾ  ದಿನಗಳ ನಿಮ್ಮ ಜೀವನವನ್ನು ನೀವೇ ನರಕ ಮಾಡಿಕೊಳ್ಳಬೇಡಿ. ಹರಯ – ಎಂಬುದು ಪ್ರಕೃತಿಯಲ್ಲಿರುವ  ಎಲ್ಲ ಮನುಷ್ಯರಿಗೂ ಬರುತ್ತದೆ! ಅಷ್ಟೇ ಅಲ್ಲ, ಸಕಲ ಜೀವರಾಶಿಗಳಿಗೂ ಬರುತ್ತದೆ. ಹರಯದ ಸಮಯದಲ್ಲಿ ಮೋಹಕ್ಕೆ ಬಲಿಯಾಗದೆ, ಭ್ರಮೆ, ಅಹಂಕಾರ, ಸ್ವಪ್ರತಿಷ್ಠೆಗಳಿಂದ  ಹೆತ್ತವರ ಮಾತು ಗುರುಗಳ ಮಾತು ಮೀರಿ ಉದ್ಧಟತನದಿಂದ ನಡೆದು ವಿಕಾರಿಗಳಾಗಿ  ಹಾಳಾಗದೆ, ನಿಮ್ಮ ಮನಸ್ಸನ್ನು ಸಂಪೂರ್ಣ ನಿಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳಿ. ಯಾರು ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಂಡು, ಓದು ಅಧ್ಯಯನದಲ್ಲಿ ಲೀನವಾಗುತ್ತೀರಿ ಅವರು ಮಾತ್ರ ನೆಮ್ಮದಿ ಜೀವನ ಕಟ್ಟಿಕೊಳ್ತೀರಿ. ಇನ್ನು ಕೆಲವೇ ದಿನಗಳು ಅಲ್ಲ ಮಕ್ಕಳೇ, ಕೆಲವೇ ಗಂಟೆಗಳು ಇವೆ!,,, ನಿಮ್ಮ ಪಬ್ಲಿಕ್ ಪರೀಕ್ಷೆಗೆ.ಚನ್ನಾಗಿ ಓದಿ ಮಕ್ಕಳೇ. ನಿಮ್ಮ ಮಾತೃಭಾಷೆ ಯಾವುದೇ ಇರಲಿ ಆದರೆ ನಿಮಗೆ ನೆಲ, ಜಲ,ಅನ್ನ ನೀಡುತ್ತಿರುವ ಕನ್ನಡದ ಬಗ್ಗೆ ಅಭಿಮಾನ ಆಸಕ್ತಿ ಪ್ರೀತಿ ಮೂಡಿಸಿಕೊಂಡು ಚನ್ನಾಗಿ ಓದಿರಿ. ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲೂ ಪಾಸಾಗಲೇಬೇಕು. ಒಂದು ವಿಷಯ ಫೇಲಾದರೂ ಫೇಲೆ! ಆದ್ದರಿಂದ  ಕನ್ನಡ ಕಲಿಕೆ ಬಗ್ಗೆ ಅಸಡ್ಡೆ ಮಾಡಬೇಡಿ. ಅದೂ ಕೂಡ ನಿಮ್ಮ ಭವಿಷ್ಯ ಬೆಳಗಲು ಇತರೆ ವಿಷಯಗಳಂತೆ ಅವಶ್ಯ. ಉತ್ತಮ ಶಿಕ್ಷಕರು ನಮ್ಮ ಶಾಲೆಯಲ್ಲಿದ್ದಾರೆ. ನಿಮಗೆ ತರಗತಿ ತೆಗೆದುಕೊಳ್ಳಲು ನನಗೆ ಬೇಕು ಕ್ಲಾಸ್,,,, ಅಂತ ಜಗಳ ಆಡ್ತಾರೆ! ನಿಮಗೆ ಕಲಿಸಲು ನಮ್ಮ ಶಿಕ್ಷಕರು ಅದೆಷ್ಟು ಕಾಳಜಿ ಹೊಂದಿದ್ದಾರೆ ಅದನ್ನು ಸದುಪಯೋಗ ಮಾಡಿಕೊಳ್ಳಿ. ಎಲ್ಲ ಪುಗಸಟ್ಟೆ ಸಿಗ್ತಿದೆ ಅಂತ ಅಹಂಕಾರ,ಅಸಡ್ಡೆ ಮಾಡಿದರೆ, ವಿದ್ಯೆ ಮಾತ್ರ ಪುಗಸಟ್ಟೆ ನಿಮ್ಮ ತಲೆಗೆ ಬರಲ್ಲ ಮಕ್ಕಳೇ!  ಅದಕ್ಕಾಗಿ ನೀವು ಪರಿಶ್ರಮ ಮಾಡಲೇಬೇಕು!  ಕಲಿಕೆಗೆ ಬಾಹ್ಯವಾಗಿ ಬೇಕಾದ ಭೌತಿಕ ಆವರಣ,ಸಾಧನ,ಸಲಕರಣೆಗಳು , ಅವಕಾಶಗಳು ವ್ಯವಸ್ಥೆಗಳು ಉತ್ತಮ ಶಿಕ್ಷಕರ ಪ್ರತಿಭೆ ಸಂಪನ್ಮೂಲತೆ   ನಮ್ಮ ಇಲಾಖೆಯಿಂದ ಸಿಗುತ್ತದೆ.ಆದರೆ  ಈ ಎಲ್ಲವನ್ನೂ  ಸದುಪಯೋಗ ಮಾಡಿಕೊಳ್ಳುವ ಸಂಸ್ಕೃತಿ ಸಂಸ್ಕಾರ ನಿಮ್ಮಲ್ಲಿ ಬಂದಾಗ ಮಾತ್ರ ನಿಮಗೆ ವಿದ್ಯೆ ಬರುತ್ತದೆ ಮಕ್ಕಳೇ.ನಿಮ್ಮ ಭವಿಷ್ಯ ಹಸನಾಗಿ ಮಾಡಿಕೊಳ್ಳಿ. ಚನ್ನಾಗಿ ಅಧ್ಯಯನ ಮಾಡಿ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆಯುವ ಮೂಲಕ; ನಿಮ್ಮ ಮನುಷ್ಯತ್ವದ ನಡೆಯ ಮೂಲಕ ನಿಮ್ಮ ತಾಯಿ- ತಂದೆ,  ಗುರುಗಳು, ನೆಲ ಜಲದ ರಿಣವನ್ನು  ತೀರಿಸಿರಿ. ನಿಮ್ಮನ್ನು ನೀವು ಜ್ಞಾನಾತ್ಮಕವಾಗಿ ಸಂಸ್ಕಾರಯುತವಾಗಿ  ಜವಾಬ್ದಾರಿಯನ್ನು  ಅರಿತು ಸರಿಯಾಗಿ ನಿರ್ಮಿಸಿಕೊಳ್ಳುವುದರಲ್ಲೇ  ನಿಮ್ಮ ಬದುಕಿನ ನೆಮ್ಮದಿ ಇದೆ.ಮಕ್ಕಳೇ. ಸರಿಯಾದ ಹೊತ್ತಿನಲ್ಲಿ ಸರಿಯಾದುದನ್ನು ಮಾಡದಿದ್ದರೆ , ಸಮಯ ಸರಿದು ಹೋದ ಮೇಲೆ ಪರಿತಪಿಸಿದರೆ ಪ್ರಯೋಜನವಿಲ್ಲ!  ಹೊತ್ತನ್ನು ಸದ್ವಿನಿಯೋಗ ಮಾಡಿಕೊಳ್ಳಿ,,,,      ಇಂತಹ ನಿಮ್ಮ ಅಧ್ಯಯನದ ಪ್ರೇರಣೆಗೆ ಪರೀಕ್ಷಾ ಫಲಿತಾಂಶ ಪ್ರಗತಿಗೆ ನಮ್ಮ ಶಾಲೆಯ ಕನ್ನಡ ಭಾಷಾ ಶಿಕ್ಷಕಿಯಾದ ಶ್ರೀಮತಿ ಎ.ಸಿ.ಶಶಿಕಲಾ ಶಂಕರಮೂರ್ತಿಯವರು ಇಂತಹ ಜ್ಞಾನಾತ್ಮಕ  ಪ್ರೇರಣಾತ್ಮಕ  ಕಾರ್ಯಕ್ರಮವನ್ನು  ಶಾಲೆಯ ಕನ್ನಡ ಭಾಷಾ ಸಂಘದ ಮೂಲಕ *ತಮ್ಮ ಸ್ವಂತ ಪ್ರಾಯೋಜಕತೆಯಲ್ಲಿ ಖರ್ಚು ಮಾಡಿ,ವಿವಿಧ ಕನ್ನಡ ಭಾಷಾ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡು, ಉತ್ತಮವಾಗಿ ಪಾಠ ಕಲಿಕೆ ಮಾಡಿದ ನಿಮಗೆಲ್ಲ ಬಹುಮಾನಗಳನ್ನು ಪ್ರದಾನ ಮಾಡಿ, ಜೊತೆಗೆ  ಪ್ರಸಾದ ವ್ಯವಸ್ಥೆಯನ್ನು ಪ್ರೀತಿಯಿಂದ  ಮಾಡಿದ್ದಾರೆ* ,,,,ಅವರಿಗೆ  ಧನ್ಯವಾದಗಳು. ಅಂತೆಯೇ   ನಮ್ಮ ಶಾಲೆಯ ಎಲ್ಲಾ ವಿಷಯ  ಶಿಕ್ಷಕರು ಪ್ರಾಮಾಣಿಕವಾಗಿ ನಿಮ್ಮ ಫಲಿತಾಂಶ ಪ್ರಗತಿಗೆ ಅನನ್ಯವಾಗಿ ಶ್ರಮಿಸುತಿದ್ದಾರೆ. ಎಲ್ಲ ಶಿಕ್ಷಕರ ಶ್ರಮದ ಸಾರ್ಥಕತೆ ,,, ಅವರೆಲ್ಲಾ ಕಲಿಸಿದ್ದನ್ನು ನಿಷ್ಠೆಯಿಂದ ನೀವು ಆಲಿಸಿ, ಕಲಿತು, ಅಭ್ಯಾಸ ಮಾಡಿ , ಪರೀಕ್ಷೆಯನ್ನು ಪ್ರಾಮಾಣಿಕವಾಗಿ ಬರೆದು ಉತ್ತಮ ಫಲಿತಾಂಶ ಪಡೆಯುವುದರಲ್ಲಿದೆ ಮಕ್ಕಳೇ. ಪರೀಕ್ಷಾ ಭಯ ಬಿಡಿ; ಜವಾಬ್ದಾರಿಯಿಂದ ಓದಿ ನಿಮಗೆ ಶುಭವಾಗಲಿ ಎಂದು ಮಕ್ಕಳ ಭವಿಷ್ಯಕ್ಕೆ ಬೇಕಾದ ಇಂತಹ ನೀತಿ ಸಾರವನ್ನು ಪ್ರತಿಬಿಂಬಿಸುವಂತಹ  ಮಾತುಗಳನ್ನು,,,,,  ಬೆಂಗಳೂರು ಉತ್ತರ ವಲಯ ಜಿಲ್ಲೆಯ ಹಾಗೂ ತಾಲ್ಲೂಕಿನ ಜಾಲಹಳ್ಳಿ ವಿಲೇಜ್ ನ ಕರ್ನಾಟಕ ಪಬ್ಲಿಕ್ ಸ್ಕೂಲ್ – ಇಲ್ಲಿನ ಪ್ರೌಢಶಾಲಾ ವಿಭಾಗದ   ಉಪಪ್ರಾಂಶುಪಾಲರಾದ ಮಾನ್ಯ ಶ್ರೀ ಗೋಪಾಲಕೃಷ್ಣ ರವರು ದಿನಾಂಕ: 13-3-2024 ರಂದು ಸಂಜೆ : 4 ಗಂಟೆಯಲ್ಲಿ  ತಮ್ಮ ಶಾಲೆಯ ಕನ್ನಡ ಭಾಷಾ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಗತಿಯ ಉತ್ತೇಜನ ಕಾರ್ಯಕ್ರಮದಲ್ಲಿ , ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ಚನ್ನಾಗಿ ಓದಲು ಸ್ಫೂರ್ತಿ ತುಂಬಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ  ಹತ್ತನೇ ತರಗತಿ ಶಿಕ್ಷಕರಾಗಿ ಉತ್ತಮವಾಗಿ ಜವಾಬ್ದಾರಿ ನಿರ್ವಹಿಸಿದ ಶ್ರೀಮತಿ. ಹೆಚ್.ಸುನಂದ ಮೇಡಂ, ಶ್ರೀ. ಎಸ್.ಆರ್ ಸುರೇಶ್ ಸರ್ ಅವರನ್ನು ಹಾಗೂ ಶಾಲೆಯ ಕರಣಿಕರಾದ ಶ್ರೀ   ಶಿವಕುಮಾರ್ ಹಾಗೂ ಶ್ರೀಮತಿ//ಸರೋಜಮ್ಮನವರನ್ನು ಗೌರವ ಕಾಣ್ಕೆ ನೀಡುವ ಮೂಲಕ  ಕನ್ನಡ ಭಾಷಾ ಶಿಕ್ಷಕಿ ಎಸಿಎಸ್ ರವರು ಉಪಪ್ರಾಂಶುಪಾಲರ ಮೂಲಕ  ಅಭಿನಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಅನನ್ಯ ಶಾಲಾ ಕಾಳಜಿಯುಳ್ಳ    ಶಾಲೆಯ ಎಸ್ ಡಿ ಎಂ ಸಿಯ ಗೌರವ ಅಧ್ಯಕ್ಷರಾದ ಶ್ರೀ. ತಿಮ್ಮರಾಯಪ್ಪರವರು, ಪ್ರೌಢಶಾಲೆಯ  ಎಲ್ಲ ಸಿಬ್ಬಂದಿಗಳು ಹತ್ತನೇ ತರಗತಿಯ ಎಲ್ಲಾ ಮಕ್ಕಳು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.