ನಿಮ್ಮ ಮನೆ ಸರಿಪಡಿಸಿಕೊಳ್ಳಿ ಎಚ್‌ಡಿಕೆಗೆ ಡಿಕೆಶಿ ತಿರುಗೇಟು

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮೇ೧೦:ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ಮೊದಲು ನಿಮ್ಮ ಮನೆಯನ್ನು ಸರಿಪಡಿಸಿಕೊಳ್ಳಿ ಎಂಬ ವಿಶ್ವಗುರು ಬಸವಣ್ಣನವರ ವಚನವನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳುವ ಮೂಲಕ ಪ್ರಜ್ವಲ್‌ರೇವಣ್ಣ ಪ್ರಕರಣದಲ್ಲಿ ತಮ್ಮ ವಿರುದ್ಧ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಬಸವಜಯಂತಿ ದಿನವಾದ ಇಂದು ವಿಧಾನಸೌಧದ ಮುಂಬಾಗದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರ ಸ್ಮರಣೆ ಮಾಡುವ ದಿನ ಇಂದಾಗಿದೆ. ಇಲ್ಲಿ ಬಸವಣ್ಣನವರ ವಿಚಾರಗಳ, ಸಿದ್ಧಾಂತಗಳ ಬಗ್ಗೆ ಮಾತನಾಡೋಣ, ಬೇರೆ ವಿಚಾರಗಳ ಬಗ್ಗೆ ಬೇಡ ಎಂದು ಹೇಳುವ ಮೂಲಕ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಜೆಡಿಎಸ್ ಮಾಡಿರುವ ಮನವಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ. ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ. ನಿಮ್ಮ ಮನೆಯನ್ನು ಸರಿಪಡಿಸಿಕೊಳ್ಳಿ. ಇದೇ ಅಂತಃರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಎಂಬ ಬಸವಣ್ಣನವರ ವಚನವನ್ನು ಹೇಳಿದರು.ರಾಜ್ಯಪಾಲರಿಗೆ ದೂರು ನೀಡಿರುವ ಕುಮಾರಸ್ವಾಮಿ ಅವರಿಗೆ ಶುಭವಾಗಲಿ ಎಂದಷ್ಟೇ ಹೇಳಿ ಪೆನ್‌ಡ್ರೈವ್ ಪ್ರಕರಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ರಾಜಕೀಯ ಹೊರತಾಗಿ ಕೆಲಸ ನಿರ್ವಹಿಸಲಿ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಬಸವಣ್ಣನವರ ಸಮಾನತೆಯ ಸಮಾಜಕ್ಕೆ ಪ್ರೇರಣೆ
ವಿಶ್ವಗುರು ಬಸವಣ್ಣ ಅವರು ವಿಶ್ವದಲ್ಲೇ ಮೊದಲನೆಯ ಸಂಸತ್ತನ್ನು ಬಸವಕಲ್ಯಾಣದಲ್ಲಿ ಆರಂಭಿಸಿದರು.ಅದರ ಬುನಾದಿಯಲ್ಲೇ ನಾವು ನಡೆದುಕೊಳ್ಳುತ್ತಿದ್ದೇವೆ. ಜಾತಿ, ಧರ್ಮ ಇಲ್ಲದ ಸಮಾನತೆಯನ್ನು ಪ್ರತಿಪಾದಿಸಿದರು. ಸಮಾನತೆಯ ಸಮಾಜಕ್ಕೆ ಪ್ರೇರಕ ಶಕ್ತಿ ಬಸವಣ್ಣ ಎಂದರು.ನಮ್ಮ ಸರ್ಕಾರದ ಕಾರ್ಯಕ್ರಮಗಳು ಬಸವಣ್ಣನವರ ತತ್ವಸಿದ್ಧಾಂತವನ್ನು ಬಸವಣ್ಣನವರು ಪ್ರತಿಪಾದಿಸಿದ ಸಮಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ. ಅಕ್ಷರ ಅನ್ನದಾಸೋಹ, ಮಹಿಳಾ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿ ಯೋಜನೆಗಳನ್ನು ಜಾರಿ ಮಾಡಿದೆ ಎಂದರು.ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಎಲ್ಲ ಸರ್ಕಾರಿ ಕಚೇರಿಗಳಲ್ಳಿ ಬಸವಣ್ಣನವರ ಭಾವಚಿತ್ರವಿಟ್ಟು ಬಸವಜಯಂತಿ ಆಚರಿಸಬೇಕು ಎಂದು ಸರ್ಕಾರ ಸೂಚಿಸಿದೆ. ಕೇವಲ ಮಾತಿನಲ್ಲಷ್ಟೇ ಆಲ್ಲ ನಡೆಯಲ್ಲಿಯೂ ಬಸವ ತತ್ವಗಳನ್ನು ಅನುಸರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಈಶ್ವರಖಂಡ್ರೆ, ಮಾಜಿ ಸಚಿವ ಶಾಸಕ ವಿನಯ್‌ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.