ನಿಮ್ಮ ಮನೆ ಮಗ ಸಿದ್ದರಾಮಯ್ಯರನ್ನು ಗೆಲ್ಲಿಸಿ: ಶಿವರಾಜ್‍ಕುಮಾರ್

ಮೈಸೂರು: ಮೇ05:- ರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ನಿಮ್ಮ ಮನೆ ಮಗನಂತೆ ನಿಮ್ಮ ಸೇವೆ ಮಾಡುತ್ತಿದ್ದು, ಈ ಬಾರಿ ಚುನಾವಣೆಯಲ್ಲಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ಆಶೀರ್ವಾದ ಮಾಡಬೇಕು ಎಂದು ಚಲನಚಿತ್ರ ನಟ ರಾಜಕುಮಾರ್ ಪುತ್ರ ಶಿವರಾಜ್‍ಕುಮಾರ್ ಹೇಳಿದರು.
ಮೈಸೂರಿನ ವರುಣ ಕ್ಷೇತ್ರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೇ.10ರಂದು ನಡೆಯಲಿರುವ ವರುಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸಿದ್ದರಾಮಯ್ಯರನ್ನು ಗೆಲ್ಲಿಸುವಂತೆ ಕೋರಿದರು. ಸಿದ್ದರಾಮಯ್ಯನವರನ್ನು ಗೆಲ್ಲಿಸಿ ಅವರನ್ನು ವಿಧಾನಸಭೆಯ ಕಳುಹಿಸಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಸಹಕಾರ ಮಾಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಸಿದ್ದರಾಮಯ್ಯನವರ ಪರವಾಗಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಪ್ರಚಾರ ನಡೆಸಿ ಗಮನ ಸೆಳೆದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ವರುಣ ವಿಧಾನಸಭಾ ಕ್ಷೇತ್ರ ನನ್ನನ್ನು ವಿರೋಧ ಪಕ್ಷದ ನಾಯಕನಾಗಿ ಮುಖ್ಯಮಂತ್ರಿಯಾಗಿ ಮಾಡಿದ ಕ್ಷೇತ್ರವಾಗಿದ್ದು ಈ ಬಾರಿಯೂ ನಮ್ಮ ವರುಣ ಕ್ಷೇತ್ರದ ಮತದಾರರು ಯಾರು ಏನೇ ಹೇಳಿದರು ಏನೇ ಅಪಪ್ರಚಾರ ಮಾಡಿದರು ನನ್ನನ್ನು ಕೈ ಬಿಡುವುದಿಲ್ಲ ಎಂಬ ವಿಶ್ವಾಸ ಭರವಸೆಯಿದ್ದು ಈ ಚುನಾವಣೆ ನನಗೆ ಕೊನೆ ಚುನಾವಣೆ ಯಾಗಿದ್ದು ನನ್ನನ್ನು ಗೆಲ್ಲಿಸಿ ಆಶೀರ್ವಾದ ಮಾಡಿ ಎಂದು ಕೈಮುಗಿದು ಮತದಾರರಲ್ಲಿ ಮನವಿ ಮಾಡಿದರು.
ಬಿದರಗೋಡು, ಮರಳೂರು, ಗೊದ್ದನಪುರ, ಹಳ್ಳಿಕೆರೆಹುಂಡಿ, ಏಚಗಳ್ಳಿ, ದಿಡ್ಡಿ, ಬಂಚಳ್ಳಿಹುಂಡಿ, ಚಿಕ್ಕಯ್ಯನ ಛತ್ರ, ತಾಂಡವಪುರ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಸಿದ್ದರಾಮನವರ ಜೊತೆಗೂಡಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿದರು. ಮತಯಾಚನೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಗೀತಾ ಶಿವರಾಜಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಎಸ್.ಸಿ.ಬಸವರಾಜು, ಮುಖಂಡರಾದ ಪಟೇಲ್ ಮಹದೇವಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ವೀರಶೈವ ಮುಖಂಡ ಕೆಪಿಸಿಸಿ ಕಾರ್ಯದರ್ಶಿ ವರುಣ ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.