ನಿಮ್ಮ ಮಗನ ಸಾವಿಗೆ ನೀವೆ ಕಾರಣನಾ

ಸಿದ್ದು ವಿರುದ್ಧ ಎಚ್‌ಡಿಕೆ ಕಿಡಿ

ಬೆಂಗಳೂರು, ಮೇ ೨೫- ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಮಾಜಿ ಪ್ರಧಾನಿ ದೇವೇಗೌಡರೇ ವಿದೇಶಕ್ಕೆ ಕಳುಹಿಸಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೇಳಿಕೆಗೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿಮ್ಮ ಮಗನನ್ನು ವಿದೇಶಕ್ಕೆ ನೀವೇ ಕಳುಹಿಸಿದ್ದೀರಾ ಅವರ ಸಾವಿಗೆ ನೀವೆ ಕಾರಣನಾ ಎಂದು ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಜೆ.ಪಿ. ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೇ ಆಗಲಿ ನೋವು ನೋವೇ. ನಿಮ್ಮ ಕುಟುಂಬದಲ್ಲೂ ಒಂದು ಘಟನೆ ನಡೆದಿದೆ. ಆಗ ನಿಮ್ಮ ಮಗನನ್ನು ವಿದೇಶಕ್ಕೆ ನೀವೇ ಕಳುಹಿಸಿದ್ದೀರಾ ಅವರ ಸಾವಿಗೆ ನೀವೇ ಕಾರಣನಾ ಎಂದು ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದರು.
ಮಾಜಿ ಪ್ರಧಾನಿ ದೇವೇಗೌಡರಿಗೆ ಗೊತ್ತಿಲ್ಲದೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರಾ ಎಂಬ ಸಿದ್ಧರಾಮಯ್ಯನವರ ಟೀಕೆಗೆ ಕೆಂಡಾಮಂಡಲರಾದ ಕುಮಾರಸ್ವಾಮಿ, ಹೀಗೆಲ್ಲಾ ಹಗುರವಾಗಿ ಮಾತನಾಡುವುದು ಸರಿಯಲ್ಲ. ಎಷ್ಟು ವರ್ಷ ನೀವು ದೇವೇಗೌಡರ ಜತೆ ಕೆಲಸ ಮಾಡಿದ್ದೀರಾ. ಅವರು ಯಾವ ರೀತಿ ರಾಜಕೀಯ ಮಾಡಿದ್ದಾರೆ ಎಂಬುದು ನಿಮಗೆ ಗೊತ್ತಿಲ್ಲವೆ ಸಿದ್ಧರಾಮಯ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಇವರಿಗೆ ಕಾನೂನಿನ ತಿಳುವಳಿಕೆ ಇಲ್ಲವೆ. ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಲು ಎಷ್ಟು ದಿನ ಪ್ರಕ್ರಿಯೆಗಳು ಹಿಡಿಯುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮಾಜಿ ಪ್ರಧಾನಿ ದೇವೇಗೌಡರು ಪ್ರಜ್ವಲ್ ರೇವಣ್ಣ ಅವರಿಗೆ ವಾಪಸ್ ಬಂದು ತನಿಖೆಗೆ ಹಾಜರಾಗು ಎಂದು ಸಂದೇಶ ಕೊಟ್ಟಿದ್ದಾರೆ. ಈ ಬಗ್ಗೆ ಸಿದ್ಧರಾಮಯ್ಯ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಅದೇ ನಿಮ್ಮ ಕುಟುಂಬಕ್ಕೆ ಅನ್ವಯಿಸಿಕೊಂಡು ನೋಡಿ ಆ ನೋವು ಏನೆಂಬುದು ಗೊತ್ತಾಗುತ್ತದೆ. ನಿಮಗೆ ನಾಚಿಕೆಯಾಗುವುದಿಲ್ಲವೆ ಎಂದು ಸಿದ್ಧರಾಮಯ್ಯ ವಿರುದ್ದ ಆಕ್ರೋಶ ಹೊರ ಹಾಕಿದ ಕುಮಾರಸ್ವಾಮಿ ಅವರು, ತನಿಖೆಯ ದಾರಿ ತಪ್ಪಿಸುವ ಕೆಲಸ ನಾನು ಮಾಡಿದ್ದೀನಾ. ಕಾಂಗ್ರೆಸ್ ಪಕ್ಷ ಒಂದು ಪಕ್ಷನಾ, ಗೌರವ ಇದೆಯೇ, ಮಾನ-ಮರ್ಯಾದೆ ಇಲ್ಲವೆ ಎಂದು ಕಿಡಿಕಾರಿದರು.
ನಿಮ್ಮ ಡಿ.ಕೆ. ಶಿವಕುಮಾರ್ ಅದೇ ಸಿ.ಡಿ. ಶಿವು ಮಾಡಿದ್ದು ಗೊತ್ತಿಲ್ಲವೆ. ದೇವರಾಜೇಗೌಡ, ಶಿವರಾಮೇಗೌಡ, ಡಿ.ಕೆ. ಶಿವಕುಮಾರ್ ಮಾತನಾಡಿದ್ದು ಏಕೆ. ಆ ವ್ಯಕ್ತಿಯನ್ನು ಶಿವಕುಮಾರ್ ಎನ್ನುವುದು ಸರಿಯಲ್ಲ. ಅವರನ್ನು ಸಿ.ಡಿ, ಶಿವು ಅಂತಲೇ ಕರೆಯಬೇಕು. ಯಾಕರ್ ಸಿಡಿ ಶಿವು ಬ್ರೋಕರ್ ಶಿವರಾಮೇಗೌಡರ ಜತೆ ಮಾತನಾಡಿದ ಎಂದು ಡಿ.ಕೆ. ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದರು.
ಇಡೀ ಪ್ರಕರಣದಲ್ಲಿ ಶಿವಕುಮಾರ್ ಪಾತ್ರ ಇಲ್ಲ ಎಂದಾದರೆ ದೇವರಾಜೇಗೌಡ, ಶಿವರಾಮೇಗೌಡ ಏಕೆ ಮಾತನಾಡಿದರು, ಇನ್ನು ಏನಾದರೂ ಸಾಕ್ಷ್ಯ ಮೆಟಿರಿಯಲ್ ಇದೆಯೆ ಎಂದು ಏಕೆ ಕೇಳಿದರು, ಬ್ರೋಕರ್ ಕೆಲಸ ತಲೆ ಹಿಡಿಯುವ ಕೆಲಸ ಮಾಡುತ್ತಿರುವುದು ಶಿವಕುಮಾರ್, ನನ್ನ ಬಗ್ಗೆ ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಫೋಸ್ಟ್ ಹಾಕಿ ಅವಹೇಳನ ಮಾಡುತ್ತೀರಾ, ನೀವು ಯಾವ ನೈತಿಕತೆ ಇಟ್ಟುಕೊಂಡಿದ್ದೀರಾ ಎಂದು ಡಿಕೆಶಿ ವಿರುದ್ಧ ಗರಂ ಆದರು.
ಪೆನ್‌ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯಾಗುವಂತೆ ಗೃಹ ಸಚಿವರು ನೋಡಿಕೊಳ್ಳಬೇಕು. ನಿಜವಾದ ಅಪರಾಧಿ ವಿರುದ್ಧ ಕ್ರಮ ಕೈಗೊಳ್ಳಿ, ನಮ್ಮದೇನು ತಕರಾರು ಇಲ್ಲ. ನಿಮಗೂ ತಂದೆ ತಾಯಿ ಇದ್ದಾರೆ. ಒಡಹುಟ್ಟಿದ ಅಕ್ಕ ತಂಗಿಯರಿದ್ದಾರೆ ಅರ್ಥ ಮಾಡಿಕೊಳ್ಳಿ ಎಂದು ಕುಮಾರಸ್ವಾಮಿ ಹೇಳಿದರು.
ಚನ್ನಗಿರಿ ಪೊಲೀಸ್ ಠಾಣೆ ಮೇಲೆ ನಡೆದಿರುವ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳಿಗೆ ನಿಯಂತ್ರಣ ಇಲ್ಲ. ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಗೌರವ ಇಲ್ಲ. ಏಕೆಂದರೆ ಸರ್ಕಾರ ಆ ರೀತಿ ಇದೆ. ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಸರ್ಕಾರಕ್ಕಾಗಲೀ, ಅಧಿಕಾರಿಗಳಿಗಾಗಲೀ ಗೌರವ ಕೊಡುವ ವಾತಾವರಣ ಇಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಈ ಸರ್ಕಾರದ ಬಗ್ಗೆ ಅಧಿಕಾರಿಗಳು, ಜನಸಾಮಾನ್ಯರು ಯಾರಿಗೂ ವಿಶ್ವಾಸ ಇಲ್ಲ ಎಂದು ಕುಮಾರಸ್ವಾಮಿ ಹೇಳಿದರು.