ನಿಮ್ಮ ತಪ್ಪು-ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ

ಮೈಸೂರು:ಡಿ:19: ನಿಮ್ಮ ತಪ್ಪು-ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿದ್ದರೆ ಇಂದು ಸಿದ್ದರಾಮಯ್ಯ ಈ ಪರಿಸ್ಥಿತಿಗೆ ಬರುತ್ತಿರಲಿಲ್ಲವೆಂದು ವಿಧಾನ ಪರಿಷತ್ ಸದಸ್ಯ ಎ.ಹೆಚ್. ವಿಶ್ವನಾಥ್ ಟೀಕಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನೆನ್ನಯಷ್ಟೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಬಹಿರಂಗವಾಗಿ ಹಲವು ವಿಷಯಗಳನ್ನು ಹೊರ ಹಾಕಿದರು. ಅದರಲ್ಲಿ ಒಪ್ಪಿಕೊಳ್ಳಲಾರದ ಹಲವು ವಿಷಯಗಳಿವೆ. ಹೊಟ್ಟೆ ಕಿಚ್ಚಿನಿಂದ ನನ್ನನ್ನು ಸೋಲಿಸಿದ್ದಾರೆ, ಬೆನ್ನಿಗೆ ಚೂರಿ ಹಾಕಿದರು, ಸ್ವಪಕ್ಷೀಯದಿಂದಲೇ ತುಳಿತ ಎಂದು ಹೇಳುತ್ತಿರುವ ಸಿದ್ದರಾಮಯ್ಯರವರಿಗೆ ಆ ನೋವಿನ ಅರಿವು ಈಗಾಗುತ್ತಿದೆಯೇ…? ನಿಮದು ಮಾತ್ರ ಮಾಂಸ, ರಕ್ತ, ಮೂಳೆಯಿಂದ ಕೂಡಿದ ದೇಹ ನಾಮದೆಲ್ಲಾ ತಗಡೇ…? ಅಂದು ಪರಮೇಶ್ವರ್‍ರವರಿಗೆ ಅಧಿಕಾರ ತಪ್ಪಿಸಿದ್ದು ಸ್ವಪಕ್ಷೀಯ ತುಳಿತವಲ್ಲವೇ…? ಯಾರೇ ಆಗಲಿ ಬೆನ್ನಿಗೆ ಚೂರಿ ಬಿದ್ದಾಗ ಆಗುವ ನೋವು ಒಂದೇ. ಇಂದು ನೀವು ಪಡುತ್ತಿರುವ ನೋವನ್ನು ಅಂದು ಪರಮೇಶ್ವರ್‍ರವರು ಪಟ್ಟಿದ್ದರು. ಬೇರೆಯವರ ಬೆನ್ನಿಗೆ ಚೂರಿ ಇರಿಯುವಾಗ ಆ ನೋವಿನ ಅರಿವು ನಿಮಗೆ ತಿಳಿಯಲಿಲ್ಲ ಈಗ ನಿಮ್ಮಗೆ ಇರಿದಿರುವುದು ಮಾತ್ರ ಬಹಳ ದೊಡ್ಡ ನೋವಾಗಿ ಕಾಣುತ್ತಿದೆಯೇ…? ನೀವು ನಮಗೆ ಹಾಕಿದ ಚೂರಿಯ ಮುಂದೆ ನಿಮಗಾಗಿರುವುದು ಏನೇನು ಅಲ್ಲ. ಸಿದ್ದರಾಮಯ್ಯರವೇ ನಿಮಗೆ ನೆನಪಿದೆಯೇ ಬೆಂಗಳೂರಿನಲ್ಲಿರುವ ನಿಮ್ಮ ಬಲಗೈ ಬಂಟ ಲಕ್ಷ್ಮಣ್‍ರವರ ಮನೆಯಲ್ಲಿ ನನಗೆ ರಾಜಕಾರಣವೇ ಬೇಡ ಸಿದ್ದರಾಮಯ್ಯನಹುಂಡಿಯಲ್ಲಿ ವ್ಯವಸಾಯ ಮಾಡಿಕೊಂಡು ಇರುತ್ತೇನೆ ಎಂದು ನಮ್ಮ ಮುಂದೆ ಕಣ್ಣೀರಿಟ್ಟ ಸಂದರ್ಭದಲ್ಲಿ ನಿಮಗೆ ದೌರ್ಯ ನೀಡಿದವರ್ಯಾರು…? ನಿಮ್ಮನ್ನು ಬೆಂಬಲಿಸಿ ಎಲ್ಲರನ್ನೂ ಒಪ್ಪಿಸಿ ಕಾಂಗ್ರೆಸ್ ವೇದಿಕೆಗೆ ಕರೆತಂದವಿಗೆ ಯಾವ ಯಾವ ರೀತಿಯಲ್ಲಿ ಇರಿದಿದ್ದೀರಿ. ಯಾವ ಪಕ್ಷಕ್ಕೆ ನಿಮ್ಮನ್ನು ಕರೆತಂದಿದ್ದರೋ ಆ ಪಕ್ಷದಿಂದಲೇ ಹೊರ ಹೋಗುವ ಸನ್ನಿವೇಶವನ್ನು ನೀವು ನಿರ್ಮಾಣ ಮಾಡಿದಾಗ ಅಂದು ನಮಗಾದ ಇರಿತದ ನೋವು ಇನ್ನೂ ವಾಸಿಯಾಗಿಲ್ಲ. ನಮಗೆ ಮೇಲಿಂದ ಮೇಲೆ ಇರಿದ ನಿಮಗೆ ಕೇವಲ ಒಂದು ಇರಿತಕ್ಕೇ ಇಷ್ಟೊಂದು ಒದ್ದಾಟವೇ…? ನಿಮ್ಮ ತಪ್ಪು-ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿದ್ದರೆ ನಿಮಗೆ ತಿಳಿಯುತ್ತಿತ್ತು ಎಂದರು.
ಸೋಲಿಗೆ 4 ಕಾರಣ:
ನನ್ನೆ ಸುದ್ದಿಗೋಷ್ಠಿಯಲ್ಲಿದ್ದವರನ್ನು “ನನ್ನ ಸೋಲಿಗೆ ಏನು ಕಾರಣ ಹೇಳಿ ನೋಡೋಣ” ಎಂದು ಕೇಳಿದಿರಲ್ಲ ಸಿದ್ದರಾಮಯ್ಯರವರೇ, ನನ್ನನ್ನು ಕೇಳಿ ಹೇಳುತ್ತೇನೆ. 36,000 ಮತಗಳ ಅಂತರದ ಸೋಲು ಸಾಮಾನ್ಯವಾದ ಸೋಲಲ್ಲ. ನಿಮ್ಮ ಸೋಲಿಗೆ ಸ್ವತಃ ನೀವೇ ಕಾರಣ, ಬೇರಾರು ಅಲ್ಲ. ನಿಮ್ಮ ಸೋಲಿನ ಬಹುಮುಖ್ಯ ಕಾರಣಗಳು ದರ್ಪ, ದುರಹಂಕಾರ, ನಾನತ್ವ, ಇಲ್ಲದ ಕೃತಜ್ಞತಾ ಮನೋಭಾವ. ನಿಮ್ಮ 5 ವರ್ಷದ ಸುದೀರ್ಘ ಅಧಿಕಾರ ಸಂಪೂರ್ಣವಾಗಿ ದರ್ಪದಿಂದ ಕೂಡಿತ್ತು, ಎಲ್ಲರ ಜೊತೆ ದುರಹಂಕಾರದ ಮಾತುಗಳು, ನಾನು-ನನ್ನಿಂದಲ್ಲೇ-ನನ್ನ ಬಿಟ್ಟರೇ ಮತ್ತೊಬ್ಬರಿಲ್ಲ ಎಂಬ ನಾನತ್ವ ಮತ್ತು ಸಹಾಯ ಮಾಡಿದವರಿಗೆ ಕೃತಜ್ಞತರಾಗಿಲ್ಲದಿರುವುದೇ ನಿಮ್ಮ ಸೋಲಿಗೆ ಕಾರಣವಾಯಿತು. ಜೊತೆಗೆ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯಲು ಮುಂದಾದದ್ದೇ ಇವರಿಗೆ ಬಹಳ ದೊಡ್ಡ ಮುಳುವಾಯಿತು. ನಿಮ್ಮ ದರ್ಪದ ನಡೆಯಿಂದ ಕಾಂಗ್ರೆಸ್ ಪಕ್ಷ ಹಾಗೂ ಮತದಾರರು ಬೇಸರದಿಂದ ಬೇಸತ್ತು ನಿಮಗೆ ಸರಿಯಾದ ಪಾಠ ಕಲಿಸಿದರು. ಇದು ನಿಮಗೆ ನೀವೆ ಮಾಡಿಕೊಂಡ ದೊಡ್ಡ ಪೆಟ್ಟು.
ಎಂತಹ ಹಿರಿಯರನ್ನು ಏಕವಚನದಿಂದ ಮಾತನಾಡುವ ನೀವು ಪಕ್ಷದ ವರಿಷ್ಠರಾದ ಸೋನಿಯಾಗಾಂಧಿ ಮತ್ತು ರಾಹುಲ್‍ಗಾಂಧಿರವರನ್ನು ಜೀ ಎಂದು ಕರೆಯುವುದು…? ರಾಹುಲ್‍ಗಾಂಧಿಯನ್ನು ‘ಏನಯ್ಯ ರಾಹುಲ್‍ಗಾಂಧಿ’ ಎಂದು ಮಾತನಾಡಿಸಿ ನೋಡೋಣ. ರಾಹುಲ್‍ಜೀ ಎಂಬ ನಾಟಕೀಯದ ಮಾತುಗಳು ಏತಕ್ಕೆ. ನಿಮಗೆ ಸಹಾಯ ಮಾಡಿದ ಮಾಜಿ ಪ್ರಧಾನಿ ದೇವೇಗೌಡರವರನ್ನು ಏಕ ವಚನದಲ್ಲಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ…?
ಭಾಷಣದ ಮಧ್ಯೆ ಕಾಂಗ್ರೆಸ್ ‘ಡೆಮಾಲಿಷ್’:
ಸಿದ್ದರಾಮಯ್ಯರವರ ಭಾಷಣವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಭಾಷಣದ ಭರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕೆಡುವಿದ್ದಾರೆ. ನನಗೆ ಬಲಗೈನವರು ಮತವನ್ನೇ ಹಾಕಿಲ್ಲ ಎಂದೇಳಿದ ಸಿದ್ದರಾಮಯ್ಯರವರಿಗೆ ಏನು ಗೊತ್ತು, ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕವಾಗಿ ಇಷ್ಟು ವರ್ಷಗಳ ಕಾಲ ಮತಹಾಕಿದ ಏಕೈಕ ಸಮುದಾಯವೇ ದಲಿತ ಸಮುದಾಯ. ಅಷ್ಟೇ ಯಾಕೆ ನಿಮ್ಮ ದರ್ಪಕ್ಕೆ ನಿಮ್ಮ ಸಮುದಾಯದವರೇ ನಿಮಗೆ ಪೂರ್ಣ ಪ್ರಮಾಣದಲ್ಲಿ ಮತ ಚಾಲಾಯಿಸಿಲ.
ವ್ಯಂಗ್ಯ ಬೇಡ:
ಮಾತೆತ್ತಿದರೆ ಅವರು ಜೈಲಿಗೆ ಹೋದರು, ಇವರು ಜೈಲ್‍ಗೆ ಹೋದರು ಎಂದು ವ್ಯಂಗ್ಯವಾಡುವ ನೀವು ಅರ್ಕಾವತಿ ಕೇಸ್‍ನನ್ನು ಸ್ವಲ್ಪ ನೆನಪಿಸಿಕೊಳ್ಳಿ. ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಎಲ್ಲಿ ನಾನು ಜೈಲ್ ಸೇರುತ್ತೇನೆ ಎಂಬ ಭಯದಿಂದ ‘ಲೋಕಾಯುಕ್ತ’ವನ್ನು ಸ್ಕ್ರ್ಯಾಪ್ ಮಾಡಿಬಿಟ್ಟಿರಿ. ಈಗಲು ಆ ಕೇಸ್‍ನನ್ನು ತೆರೆಯಿಸಿ ಆಗ ತಿಳಿಯುತ್ತದೆ ನೀವು ಎಲ್ಲಿ ಸೇರುತ್ತೀರಿ ಎಂದು. ಯಾರನ್ನು ನಿಮ್ಮ ವ್ಯಂಗ್ಯ ನುಡಿಯಿಂದ ಚುಚ್ಚ ಬೇಡಿ.
ನನ್ನ ಮುಖ್ಯ ಉದ್ದೇಶ ರಾಜ್ಯದಲ್ಲಿ ರಾಕ್ಷಸ ಮತ್ತು ಕುಟುಂಬ ರಾಜಕಾರಣದ ಬದಲು ಪ್ರಜಾಪ್ರಭುತ್ವದ ನಿಷ್ಠಾವಂತ ಸರ್ಕಾರಬೇಕು.
ಈ ಸಂದರ್ಭದಲ್ಲಿ ಮೋಹನ್, ಮಂಜು, ಬಸವೇಗೌಡ ಇದ್ದರು.