ನಿಮ್ಮ ಒಂದು ಮತದಾನದಲ್ಲಿ ದೇಶದ ಭವಿಷ್ಯ ಅಡಗಿದೆ : ಡಾ. ಶಿವಕುಮಾರ ಶೆಟಕಾರ

ಬೀದರ:ಎ.8: ನಾನು ಒಂದು ಮತ ಹಾಕದಿದ್ದರೆ ದೇಶ ಏನು ಹಾಳು ಬೀಳಲ್ಲ. ಮತದಾನ ಮಾಡದಿದ್ದರೂ ನಡೆಯುತ್ತದೆ ಎಂದು ಮನೆಯಲ್ಲಿ ಕುಳಿತು ಹರಟೆ ಹೊಡೆಯುವುದನ್ನು ಜನರು ಬಿಡಬೇಕು. ನಿಮ್ಮ ಒಂದು ಮತದಾನದಲ್ಲಿ ದೇಶದ ಭವಿಷ್ಯ ಅಡಗಿದೆ. ಮತದಾನ ಎಂಬುದು ಪ್ರಜಾಪ್ರಭುತ್ವದ ಹಬ್ಬವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕೆಂದು ಬ್ರಿಮ್ಸ್ ನಿರ್ದೇಶಕರು ಹಾಗೂ ಮತದಾರ ಜಾಗೃತಿ ಸಂಘದ ಅಧ್ಯಕ್ಷ ಡಾ. ಶಿವಕುಮಾರ ಶೆಟಕಾರ ತಿಳಿಸಿದರು.

ನಗರದ ಬ್ರಿಮ್ಸ್ ಕಾಲೇಜಿನಲ್ಲಿ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಬ್ರಿಮ್ಸ್ ಕಾಲೇಜಿನಲ್ಲಿ ನಡೆದ ಮತದಾರ ಜಾಗೃತಿ ಸಂಘದ ರಚನೆ ಮತ್ತು ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಯುವಕ-ಯುವತಿಯರು ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯಬೇಕು. ಬಹಳಷ್ಟು ಕಾಲೇಜಿನ ವಿದ್ಯಾರ್ಥಿಗಳ ಮತದಾನ ವ್ಯರ್ಥವಾಗುತ್ತಿವೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಮತವನ್ನು ವ್ಯರ್ಥಮಾಡದೆ ತಮ್ಮ ಗ್ರಾಮಗಳಿಗೆ ಹೋಗಿ ಮತದಾನ ಮಾಡಬೇಕೆಂದು ತಿಳಿಸಿದರು.

ಮತದಾರ ಜಾಗೃತಿ ಸಂಘದ ನೋಡಲ್ ಅಧಿಕಾರಿ ಡಾ. ಧನಂಜಯ ನಾಯಕ್ ಅವರು ಮಾತನಾಡಿ “18 ವರ್ಷ ಮೇಲ್ಪಟ್ಟ ಯುವಕ-ಯುವತಿಯರು ಮತದಾರ ಚೀಟಿ ಪಡೆಯಲು ಮೊದಲು ಚುನಾವಣಾ ವೆಬ್‍ಸೈಟ್‍ಗೆ ಭೇಟಿ ನೀಡಿ, ಅದು ಕೇಳಿದ ದಾಖಲಾತಿಗಳನ್ನು ಸಲ್ಲಿಸಿ, ಗುರುತಿಸಿನ ಚೀಟಿ ಪಡೆಯಬೇಕು. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಎಪ್ರಿಲ್ 11 ಕೊನೆಯ ದಿನಾಂಕವಾಗಿದ್ದು, ತಪ್ಪದೇ ನೊಂದಣಿ ಮಾಡಿಸಬೇಕೆಂದು ಮೆಡಿಕಲ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಂಘದ ಸಹಸಂಚಾಲಕ ಶಶಿಕಾಂತ ಹೊಸದೊಡ್ಡೆ ಮಾತನಾಡಿ “ನಮ್ಮ ಬ್ರಿಮ್ಸ್ ಕಾಲೇಜಿನಲ್ಲಿ ಮತದಾರ ಜಾಗೃತಿ ಸಂಘ ರಚನೆಯಾಗಿದ್ದು ಹೆಮ್ಮೆಯ ವಿಷಯ. ಮತದಾನದ ಕುರಿತು ಜಾಗೃತಿ ಮೂಡಿಸುವುದೇ ಸಂಘದ ಪ್ರಮುಖ ಉದ್ದೇಶವಾಗಿದೆ. ಮತದಾನದ ಮಹತ್ವ ಗೊತ್ತಿದ್ದರೂ ಮತದಾನ ಮಾಡದೇ ಇರುವವರಿಗೆ ಜಾಗೃತಿ ಮೂಡಿಸುವುದು ಪ್ರಮುಖವಾಗಿದೆ. ಮತದಾರರು ಖುದ್ದಾಗಿ ಜಾಗೃತಿಗೊಂಡು ಇತರರಿಗೂ ಇದರ ಮಹತ್ವ ಕುರಿತು ತಿಳಿಸಬೇಕೆಂದರು.

ವೇದಿಕೆ ಮೇಲೆ ಸಂಘದ ಸಂಯೋಜಕ ಡಾ. ಜ್ಞಾನೇಶ್ವರ ಪಾಟೀಲ, ಡಾ. ರಾಜೇಶ ಪಾರಾ, ಡಾ. ರಾಜಕುಮಾರ ಹೆಬ್ಬಾಳೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ಅಶೋಕ ಶೆಳಕೆ, ಡಾ. ದೀಲಿಪ ರಾಠೋಡ್, ಡಾ. ಕೋಮಲ ಮೆದಾ, ಅಮೂಲ ಕಾಂಬಳೆ, ಡಾ. ಸುಧಿರಾ, ರವೀಂದ್ರ ರಾಠೋಡ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು ಹಾಜರಿದ್ದರು.