ನಿಮ್ಮಲ್ಲಿರುವ ಪ್ರತಿಭೆ ಅನಾವರಣ ಮಾಡಿ: ಡಾ.ಎಸ್.ಹೆಚ್.ಪಾಟೀಲ್

ಕಲಬುರಗಿ:ಮೇ.25:ಪ್ರಶಿಕ್ಷಣಾರ್ಥಿಗಳು ವಿದ್ಯೆಯ ಜೊತೆಗೆ ತಮ್ಮಲ್ಲಿನ ಕೌಶಲ್ಯ, ಸೃಜನಶೀಲತೆ, ವಿವೇಚನೆ ಸಾಮಾನ್ಯ ಜ್ಞಾನದ ಅರಿವನ್ನು ಹೆಚ್ಚಿಸಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಜಗತ್ತಿಗೆ ಅನಾವಾರಣ ಮಾಡುವ ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕೆಂದು ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸತೀಶ್‍ಕುಮಾರ್.ಎಚ್.ಪಾಟೀಲ್ ಹೇಳಿದರು.

ಅವರು ಜೇವರ್ಗಿ ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅಧ್ಯಕ್ಷತೆ ಸ್ಥಾನ ವಹಿಸಿಕೊಂಡು ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸೃಜನಶೀಲತೆ, ಕ್ರೀಯಾಶೀಲತೆಯನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಪ್ರಶಿಕ್ಷಣಾರ್ಥಿಗಳು ಗುಣಮಟ್ಟದ ವೃತ್ತಿಪರ ಬಿಎಡ್ ಶಿಕ್ಷಣ ಪಡೆಯಬೇಕು ಎಂದು ಆಶಿಸಿದ್ದ ಡಾ. ತೋಂಟದ ಸಿದ್ದಲಿಂಗ ಶ್ರೀಗಳು ಹಾಗೂ ಈಗಿನ ಡಾ. ತೋಂಟದ ಸಿದ್ದರಾಮ ಶ್ರೀಗಳ ಆಶಯವನ್ನು ಸಮರ್ಥವಾಗಿ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಹೇಳಿದರು. ಪ್ರೋಫೆಸರ್ ಶಿವಸಾಯಿ ಮಮ್ದಾಪುರ್ ಮಾತನಾಡಿ ಕೌಶಲ್ಯಾಧಾರಿತ ಶಿಕ್ಷಣ ಮುಖ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸೂರ್ಯಕಾಂತ್ ಕುಲಕರ್ಣಿ, ದೇವೇಂದ್ರಪ್ಪ ವಿಶ್ವಕರ್ಮ, ಗ್ರಂಥಪಾಲಕ ಸಿದ್ದಣ್ಣ ಹತಗುಂದಿ, ಉಪನ್ಯಾಸಕಿಯರಾದ ಕಾವೇರಿ ಘಾಟೆ, ಕವಿತಾ ಹಿರೇಮಠ, ಪ್ರಥಮ ದರ್ಜೆ ಸಹಾಯಕ ಅನಂತಕುಮಾರ್ ಪ್ರಶಿಕ್ಷಣಾರ್ಥಿಗಳು ಸೇರಿ ಮುಂತಾದವರು ಹಾಜರಿದ್ದರು.