ನಿಫಾ ಭೀತಿ: ಕಲ್ಲಿಕೋಟೆಯಲ್ಲಿ ಶಾಲಾ- ಕಾಲೇಜಿಗೆ ರಜೆ

ಕಲ್ಲಿಕೋಟೆ, ಸೆ.೧೬- ಕೇರಳದ ಕಲ್ಲಿಕೋಟೆಯಲ್ಲಿ ದಿನದಿಂದ ದಿನಕ್ಕೆ ನಿಫಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇದೇ ೨೪ ರ ತನಕ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಸೋಂಕು ಹೆಚ್ಚುತ್ತಿರುವುದು ಒಂದೆಡೆಯಾದರೆ, ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಗುರುತಿಸಿ ಅವರನ್ನು ತಪಾಸಣೆ ನಡೆಸುವ ಅಗತ್ಯವಿದೆ. ಜೊತೆಗೆ ಸೋಂಕು ಮತ್ತಷ್ಟು ಜನರಿಗೆ ಹರಡುವುದನ್ನು ತಡೆಯಲು ಸೆಪ್ಟೆಂಬರ್ ೨೪ ರವರೆಗೆ ಒಂದು ವಾರದವರೆಗೆ ಶಾಲೆಗಳು, ವೃತ್ತಿಪರ ಕಾಲೇಜುಗಳು ಮತ್ತು ಎಲ್ಲಾ ಬೋಧನಾ ಕೇಂದ್ರಗಳಿಗೆ ಕೇರಳ ಸರ್ಕಾರ ರಜೆ ಘೋಷಿಸಿದೆ.ಇದೇ ವೇಳೆ ವಾರವಿಡೀ ಆನ್‌ಲೈನ್ ತರಗತಿಗಳನ್ನು ನಡೆಯಲಿದೆ ಎಂದು ಕೋಳಿಕೋಡ್ ಜಿಲ್ಲಾಡಳಿತ ಖಚಿತ ಪಡಿಸಿದೆ. ಒಟ್ಟಾರೆ ಸೋಂಕು ಹೆಚ್ಚುತ್ತಿರುವುದು ಕಲ್ಲಿಕೋಟೆ ಜಿಲ್ಲೆಯ ಜನರಲ್ಲದೆ ಕೇರಳಾದ್ಯಂತ ಆತಂಕಕ್ಕೆ ಕಾರಣವಾಗಿದೆ.
೧೦೮೦ ಸೋಂಕಿತರ ಪಟ್ಟಿ
ನಿಫಾ ಸೋಂಕಿನಿಂದ ಇಲ್ಲಿಯ ತನಕ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿ ೧,೦೮೦ ಜನರಿದ್ದು, ಮತ್ತೆ ೧೩೦ ಜನರನ್ನು ಹೊಸದಾಗಿ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.ಈ ಪಟ್ಟಿಯಲ್ಲಿ ೩೨೭ ಮಂದಿ ಆರೋಗ್ಯ ಕಾರ್ಯಕರ್ತರು ಇದ್ದಾರೆ. ಇತರೆ ಜಿಲ್ಲೆಗಳಲ್ಲಿ ಒಟ್ಟು ೨೯ ಮಂದಿ ನಿಫಾ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿದ್ದಾರೆ. ಅವರಲ್ಲಿ ೨೨ ಮಂದಿ ಮಲಪ್ಪುರಂ, ವಯನಾಡ್‌ನಿಂದ ಒಬ್ಬರು ಮತ್ತು ಕಣ್ಣೂರು ಮತ್ತು ತ್ರಿಶೂರ್‌ನಿಂದ ತಲಾ ಮೂವರು ಇದ್ದಾರೆ ಎಂದು ಹೇಳಿದ್ದಾರೆ.
ಹೆಚ್ಚಿನ ಅಪಾಯದ ವಿಭಾಗದಲ್ಲಿ ೧೭೫ ಸಾಮಾನ್ಯ ಜನರು ಮತ್ತು ೧೨೨ ಆರೋಗ್ಯ ಕಾರ್ಯಕರ್ತರು ಇದ್ದಾರೆ. ಅವರ ಮೇಲೆ ಸಂಪೂರ್ಣ ನಿಗಾ ವಹಿಸಲಾಗಿದೆ. ಆಗಸ್ಟ್ ೩೦ ರಂದು ಸಾವನ್ನಪ್ಪಿದ ವ್ಯಕ್ತಿಯ ಪರೀಕ್ಷೆಯ ಫಲಿತಾಂಶ ಸಕಾರಾತ್ಮಕವಾಗಿ ಬಂದಿದ್ದು, ಜಿಲ್ಲೆಯಲ್ಲಿ ನಿಫಾ ಸೂಚ್ಯಂಕ ಪ್ರಕರಣವಾಗಿರುವುದರಿಂದ ಸಂಪರ್ಕ ಪಟ್ಟಿಯಲ್ಲಿರುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

೬ ಮಂದಿಗೆ ಸೋಂಕು
ಕಲ್ಲಿಕೋಟೆ ಜಿಲ್ಲೆಯಲ್ಲಿ ಈವರೆಗೆ ರಾಜ್ಯದಲ್ಲಿ ಆರು ನಿಪಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಆಗಸ್ಟ್ ೩೦ ರಂದು ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ೧೭ ಜನರನ್ನು ಪ್ರತ್ಯೇಕಿಸಲಾಗಿದೆ. ಸಕ್ರಿಯ ಪ್ರಕರಣಗಳಲ್ಲಿ ನಾಲ್ವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ನಿಫಾ ಪ್ರಕರಣಗಳಿಗೆ ಚಿಕಿತ್ಸೆ ನೀಡುವ ಎಲ್ಲಾ ಆಸ್ಪತ್ರೆಗಳು ದಿನಕ್ಕೆ ಎರಡು ಬಾರಿ ವೈದ್ಯಕೀಯ ತಪಾಸಣೆ ನಡೆಸಬೇಕು ವರದಿಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಬೇಕು. ರಾಜ್ಯದ ಸಾಂಕ್ರಾಮಿಕ ರೋಗ ನಿಯಂತ್ರಣ ಪೊರೀಟೋಕಾಲ್‌ಗಳ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಈ ಕುರಿತು ಆದೇಶ ಹೊರಡಿಸಿದ್ದಾರೆ.