ನಿಧಿ ಕಳ್ಳತನ ಆರೋಪ, ಐವರಿಗೆ ಗ್ರಾಮಸ್ಥರ ಥಳಿತ?


ದೇವದುರ್ಗ.ಜೂ.೬-ಸಮೀಪದ ಮಾನಸಗಲ್ ಗ್ರಾಮದ ಐತಿಹಾಸಿಕ ಶ್ರೀ ಲಕ್ಷ್ಮಿ ರಂಗನಾಥ ದೇವಸ್ಥಾನಕ್ಕೆ ಲಾಕ್ಡೌನ್ ಸಮಯದಲ್ಲಿ ಭೇಟಿ ನೀಡಿದ್ದ ಐವರ ಮೇಲೆ ಅನುಮಾನಗೊಂಡ ಗ್ರಾಮಸ್ಥರು ಘೇರಾವ್ ಹಾಕಿ ಥಳಿಸಿದ ಘಟನೆ ಇತ್ತೀಚೆಗೆ ನಡೆದಿದೆ?. ವಶಕ್ಕೆ ಪಡೆದ ಆರೋಪಿಗಳನ್ನು ಪೊಲೀಸರು ಪ್ರಕರಣ ದಾಖಲಿಸದೆ ಬಿಟ್ಟಿರುವುದು, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬೆಂಗಳೂರು ಸಮೀಪದ ಕೊಳ್ಳೇಗಾಲ ಮೂಲದ ಪೂಜಾರಿ, ಗುತ್ತಿಗೆದಾರ ಹಾಗೂ ಹಿರಿಯ ಪೊಲೀಸ್ ಪೇದೆಯೊಬ್ಬರು ಒಳಗೊಂಡ ನಾಲ್ವರ ತಂಡ ಇನೋವಾ ಕಾರ್ ನಲ್ಲಿ ಕೊತ್ತದೊಡ್ಡಿ ಗ್ರಾಮದ ವ್ಯಕ್ತಿಯೊಬ್ಬರ ಮೂಲಕ ಜೂ.೨ರಂದು ಮಾನಸಗಲ್ ಶ್ರೀ ಲಕ್ಷ್ಮಿ ರಂಗನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇವರು ಅಲ್ಲಿನ ಪೂಜಾರಿ ಜೊತೆ ಕೆಲ ವಿಷಯಗಳ ಕುರಿತು ವಿಚಾರಿಸಿದಾಗ, ಅನುಮಾನಗೊಂಡ ದೇವಸ್ಥಾನದ ಪೂಜಾರಿ, ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಗ್ರಾಮದ ಭಕ್ತರು, ಈ ಐದು ಜನರ ಮೇಲೆ ಅನುಮಾನಗೊಂಡು, ವಿಚಾರಣೆ ನಡೆಸಿದ್ದಾರೆ. ಅವರು ಸೂಕ್ತ ಉತ್ತರ ನೀಡದ ಹಿನ್ನೆಲೆ, ನಿಧಿಗಳ್ಳತನಕ್ಕೆ ಬಂದಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಉದ್ರಿಕ್ತಗೊಂಡ ಗುಂಪು ಅವರು ತಂದಿದ್ದ ಇನೋವಾ ಕಾರ್ ಮೇಲೆ ಕಲ್ಲೆಸೆದು ಗಾಜು ಪುಡಿಗಟ್ಟಿದ್ದಾರೆ. ಐದು ಜನರನ್ನು ದಿಗ್ಬಂಧನಕ್ಕೆ ಒಳಪಡಿಸಿದ ಗ್ರಾಮಸ್ಥರು, ನಂತರ ಪಟ್ಟಣ ಪೊಲೀಸ್ ಠಾಣೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ಪಿಐ ಹನುಮಂತ ಸಣ್ಣಮನಿ ನೇತೃತ್ವದ ಪೊಲೀಸರ ತಂಡ ಗ್ರಾಮಕ್ಕೆ ಭೇಟಿ ನೀಡಿ ಐದು ಜನರನ್ನು ವಶಕ್ಕೆ ಪಡೆದಿದ್ದಾರೆ. ಜೂ.೩ ಮತ್ತು ೪ರಂದು ವಿಚಾರಣೆ ನಡೆಸಿ ಜೂ.೪ರ ಸಂಜೆ ಆರೋಪಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಬಿಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪೊಲೀಸರು ಹೇಳುವುದೇನು?
ಬೆಂಗಳೂರಿನ ಐವರ ತಂಡ ಮಂತ್ರಾಲಯ ಶ್ರೀ ರಾಘವೇಂದ್ರ ದೇವರ ದರ್ಶನಕ್ಕೆ ಬಂದಿದ್ದಾರೆ. ಅದರಲ್ಲಿದ್ದ ಗುತ್ತಿಗೆದಾರರಿಗೆ, ಗಲಗ ಗ್ರಾಮದ ಉಪ ಗುತ್ತಿಗೆದಾರರ ಹಣ ಕೊಡುವುದಾಗಿ ಹೇಳಿದ್ದರಿಂದ, ಮಂತ್ರಾಲಯದಿಂದ ಗಲಗ ಗ್ರಾಮಕ್ಕೆ ಬಂದಿದ್ದಾರೆ. ಅಲ್ಲಿಂದ ಮಾನಸಗಲ್ ಶ್ರೀ ಲಕ್ಷ್ಮಿ ರಂಗನಾಥ ದೇವಸ್ಥಾನ ದರ್ಶನಕ್ಕೆ ಬಂದಿದ್ದ ವೇಳೆ, ಗ್ರಾಮಸ್ಥರು ಅನುಮಾನಗೊಂಡು, ಅವರ ಮೇಲೆ ಥಳಿಸಿದ್ದಾರೆ. ಕೆಲವರು ಪೊಲೀಸರಿಗೆ ಫೋನ್ ಮಾಡಿದ್ದರಿಂದ ಗ್ರಾಮಕ್ಕೆ ಭೇಟಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ನಿಧಿಗಳ್ಳತನಕ್ಕೆ ಬಂದಿದ್ದಾರೆ ಎನ್ನುವ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ. ಅಲ್ಲದೆ ಇವರ ವಿರುದ್ಧ ಗ್ರಾಮಸ್ಥರು ಯಾವುದೇ ದೂರು ಕೊಟ್ಟಿಲ್ಲ. ಹೀಗಾಗಿ ವಿಚಾರಣೆ ನಡೆಸಿ ಆರೋಪಿಗಳನ್ನು ಕಳುಹಿಸಿದ್ದೇವೆ ಎನ್ನುತ್ತಿದ್ದಾರೆ.
ಅನುಮಾನ?
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಬಂದಿರುವುದಾಗಿ ಆರೋಪಿಗಳು ಹೇಳಿಕೊಂಡಿದ್ದಾರೆ. ಆದರೆ ಲಾಕ್ಡೌನ್ ಸಮಯದಲ್ಲಿ ಭಕ್ತರಿಗೆ ದೇವಸ್ಥಾನ ದರ್ಶನಕ್ಕೆ ಅವಕಾಶವಿಲ್ಲ ಎಂದು ಶ್ರೀಮಠ ತಿಳಿಸಿದೆ. ಆದರೂ ಲಾಕ್ ಡೌನ್ ಸಮಯದಲ್ಲಿ ದರ್ಶನಕ್ಕೆ ಯಾಕೆ ಬಂದರು?. ಅಲ್ಲಿಂದ ಗಲಗ ಗ್ರಾಮದಲ್ಲಿ ಯಾವ ಗುತ್ತಿಗೆದಾರರ ಬಳಿ ಹಣ ಪಡೆದಿದ್ದಾರೆ? ಎನ್ನುವುದು ತಿಳಿಸಿಲ್ಲ. ಜೊತೆಗೆ ಲಾಕ್ಡೌನ್ ಇದ್ದರೂ ಮಾನಸಗಲ್ ದೇವಸ್ಥಾನ ದರ್ಶನಕ್ಕೆ ಬಂದಿರುವುದಾದರೂ ಯಾಕೆ?. ದೇವಸ್ಥಾನಕ್ಕೆ ಬಂದಿರುವವರು ಕಾಯಿ ಕೊಟ್ಟು ಹೋಗುವುದು ಸಾಮಾನ್ಯ. ಆದರೆ ದೇವಸ್ಥಾನದ ಸುತ್ತಲೂ ಓಡಾಡಿದ್ದು, ವಿಚಾರಣೆ ನಡೆಸಿದ್ದು ಯಾಕೆ? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಗ್ರಾಮಸ್ಥರು ಮನಬಂದಂತೆ ಥಳಿಸಿದ್ದರೂ, ಪೊಲೀಸರಿಗೆ ಯಾಕೆ ಇವರು ದೂರು ನೀಡಲಿಲ್ಲ?. ಅವರು ತಂದಿದ್ದ ಇನೋವಾ ಕಾರ್ ಮೇಲೆ ದಾಳಿ ಮಾಡಿದ್ದರೂ, ಪ್ರಕರಣ ಯಾಕೆ ದಾಖಲಿಸಲಿಲ್ಲ.? ವಿಚಾರಣೆ ನೆಪದಲ್ಲಿ ಎರಡು ದಿನ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಯಾಕೆ?. ಯಾವುದೇ ಕ್ರಮ ಕೈಗೊಳ್ಳದೆ ಬಿಟ್ಟಿರುವುದು ಯಾಕೆ?. ಎನ್ನುವ ಅನುಮಾನ ಭಕ್ತರು ವ್ಯಕ್ತಪಡಿಸುತ್ತಿದ್ದಾರೆ.

ಕೋಟ್…
ಬೆಂಗಳೂರು ಮೂಲದ ಐವರು ಆರೋಪಿಗಳು ಮಾನಸಗಲ್ ಗ್ರಾಮಕ್ಕೆ ಬಂದಿರುವುದು ನಿಜ. ವಿಚಾರಣೆ ವೇಳೆ ಮಂತ್ರಾಲಯ ದೇವರ ದರ್ಶನಕ್ಕೆ ಬಂದಿರುವುದಾಗಿ ಹಾಗೂ ಗಲಗ ಗ್ರಾಮದಲ್ಲಿ ಗುತ್ತಿಗೆದಾರರಿಂದ ಹಣ ಪಡೆಯಲು ಗ್ರಾಮಕ್ಕೆ ಬಂದಿದ್ದು, ಅಲ್ಲಿಂದ ಮಾನಸಗಲ್ ದೇವರ ದರ್ಶನಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ಗ್ರಾಮಸ್ಥರು ಮೌಖಿಕವಾಗಿ ದೂರು ನೀಡಿದ್ದರಿಂದ ಡಿವೈಎಸ್ಪಿ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. ನಿಧಿ ಕಳ್ಳತನಕ್ಕೆ ಬಂದಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಅಲ್ಲದೇ ದೇವಸ್ಥಾನ ಸಮಿತಿ ಆಗಲಿ, ಭಕ್ತರ ಆಗಲಿ ನಮಗೆ ದೂರು ಕೊಟ್ಟಿಲ್ಲ. ಹೀಗಾಗಿ ಆರೋಪಿಗಳನ್ನು ಬಿಟ್ಟಿದ್ದೇವೆ.
! ಹನುಮಂತ ಸಣ್ಣಮನೆ
ಪಿಐ ದೇವದುರ್ಗ