ನಿಧಾನವಾಗಿ ನೌಕರರು ಸೇವೆಗೆ ಹಾಜರು

ಬ್ಯಾಡಗಿ, ಏ 18: ರಾಜ್ಯದಾದ್ಯಂತ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಇದರ ನಡುವೆ ನಿಧಾನವಾಗಿ ನೌಕರರು ಸೇವೆಗೆ ಹಾಜರಾಗುವ ಮೂಲಕ ಮತ್ತೆ ಬಸ್ ಸಂಚಾರವನ್ನು ಯಥಾಸ್ಥಿತಿಗೆ ತರುವ ಪ್ರಯತ್ನ ಶಾಸಕರು ಮತ್ತು ಅಧಿಕಾರಿಗಳಿಂದ ನಡೆದಿದೆ.
ಪಟ್ಟಣದ ಸಾರಿಗೆ ಘಟಕದಿಂದ ಶನಿವಾರ 6ಕ್ಕೂ ಹೆಚ್ಚು ಬಸ್’ಗಳು ಸಂಚಾರ ಪ್ರಾರಂಭಿಸಿದ್ದು, ಅದರಲ್ಲಿ ಹಾವೇರಿ, ರಾಣೆಬೆನ್ನೂರು ಮಾರ್ಗಗಳಲ್ಲಿ ತಲಾ 3ರಂತೆ ಬಸ್ಸುಗಳು ಸಂಚಾರ ನಡೆಸಿರುವುದು ಪ್ರಯಾಣಿಕರಲ್ಲಿ ಅಲ್ಪ ಪ್ರಮಾಣದಲ್ಲಿ ಸಂತಸ ಮೂಡಿಸಿದೆ. ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಸ್ಥಳೀಯ ಘಟಕದ ವ್ಯವಸ್ಥಾಪಕರ ನಿರಂತರ ಪ್ರಯತ್ನದ ಮೇರೆಗೆ ನೌಕರರು ವಾಪಸ್ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
ಖಾಸಗಿ ವಾಹನಗಳ ಭರಾಟೆ:
ಪೂರ್ಣ ಪ್ರಮಾಣದಲ್ಲಿ ಕೆಎಸ್‍ಆರ್‍ಟಿಸಿ ಸಾರಿಗೆ ಸಂಚಾರ ಆರಂಭವಾಗದ ಕಾರಣ ಖಾಸಗಿ ಗೂಡ್ಸ್, ಜೀಪ್, ಟ್ರ್ಯಾಕ್ಸ್‍ಗಳ ಮಾಲೀಕರು ಪ್ರಯಾಣಿಕರಿಗೆ ಸೇವೆಯನ್ನು ಕಲ್ಪಿಸಿದ್ದಾರೆ. ಬಸ್ ನಿಲ್ದಾಣದಲ್ಲಿಯೇ ಖಾಸಗಿ ಟ್ರಾವೆಲ್ಸ್?ಗಳು ಜನರನ್ನು ಕರೆದುಕೊಂಡು ಹೋಗುವುದು ಕಂಡು ಬಂದಿತು.

ರಾಜ್ಯದಲ್ಲಿ ಎರಡನೇ ಹಂತದಲ್ಲಿ ಹೆಚ್ಚುತ್ತಿರುವ ಕೋರೋನಾ ಸೋಂಕಿನ ಸಂಕಷ್ಟದಲ್ಲಿ ಸಾರಿಗೆ ಮುಷ್ಕರ ನಡೆಸುವ ಮೂಲಕ ಸಾರ್ವಜನಿಕವಾಗಿ ತೊಂದರೆ ಮಾಡುತ್ತಿರುವುದು ಸರಿಯಲ್ಲ. ಈ ಕೂಡಲೇ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ಕೈಬಿಟ್ಟು ಸೇವೆಗೆ ಮುಂದಾಗುವುದು ಅವಶ್ಯವಾಗಿದೆ.
ವಿರೂಪಾಕ್ಷಪ್ಪ ಬಳ್ಳಾರಿ
ಶಾಸಕರು ಬ್ಯಾಡಗಿ….

ಚಾಲಕರು ಮತ್ತು ನಿರ್ವಾಹಕರು ಸೇರಿದಂತೆ ಎಲ್ಲ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ಕೈಬಿಟ್ಟು ಸೇವೆಗೆ ಹಾಜರಾದರೆ ಅವರಿಗೆ ಯಾವುದೇ ನಿಬಂಧನೆಗಳನ್ನು ಹಾಕದೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ತಾಲೂಕಿನಲ್ಲಿ ಆದಷ್ಟು ಬೇಗನೆ ಸಾರಿಗೆ ನೌಕರರು ಸೇವೆಗೆ ಹಾಜರಾಗುವ ಮೂಲಕ ಸಾರಿಗೆ ಸಂಚಾರ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ.
ಆರ್.ಸಿ.ಪಾಟೀಲ,
ಘಟಕ ವ್ಯವಸ್ಥಾಪಕರು
ಬ್ಯಾಡಗಿ..