ನಿದ್ರೆ ಕೆಟ್ಟರೇ ಗುರಿ ತಲುಪುವ ಸೊಗಸು; ವಿಮಲಾ ಬಸವರಾಜು

ವಿಜಯಪುರ, ಮಾ ೧೯- ಪ್ರತಿಯೊಬ್ಬರು ನಿದ್ರೆ ಮಾಡಿದಾಗ ಮಾತ್ರ ಏನನ್ನಾದರೂ ಕನಸು ಕಾಣಲು ಸಾಧ್ಯ, ಆದರೆ ಅದನ್ನು ಸಾಧಿಸಬೇಕೆಂದಾಗ ನಿದ್ರೆಕೆಟ್ಟು ದುಡಿಯಬೇಕೆಂದು ಪುರಸಭಾಧ್ಯಕ್ಷೆ ವಿಮಲಾ ಬಸವರಾಜು ತಿಳಿಸಿದರು.
ಅವರು ಇಲ್ಲಿನ ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯದ ಬಳಿಯಲ್ಲಿನ ಗಾಯತ್ರಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಏರ್ಪಡಿಸಲಾದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಮಾತನಾಡುತ್ತಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ವತಿಯಿಂದ ೧೦,೦೦೦ಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಕೇಂದ್ರಗಳನ್ನು ತೆರೆದಿದ್ದು ಇವುಗಳ ಮೂಲಕ ಸರ್ಕಾರವು ಸಾರ್ವಜನಿಕರಿಗೆ ತಲುಪಿಸಬೇಕಾದ ಸರ್ಕಾರದ ಸಹಾಯ ಹಾಗೂ ದಾಖಲೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಾರಂಭಗೊಂಡ ಸ್ತ್ರೀ ಸ್ವಸಹಾಯ ಕೇಂದ್ರಗಳ ಪೈಕಿ ದೇವನಹಳ್ಳಿ ತಾಲೂಕು ಅತ್ಯುತ್ತಮ ಸಾಧನೆ ತೋರಿದ್ದು ಇಲ್ಲಿ ನಾಲ್ಕು ಸಾವಿರ ಸ್ವಸಹಾಯ ಕೇಂದ್ರಗಳ ೩೫ ಸಾವಿರಕ್ಕೂ ಹೆಚ್ಚು ಸದಸ್ಯರು ಪ್ರತಿ ವಾರಕ್ಕೆ ೧೦ ರೂಗಳಂತೆ ಪಾವತಿಸಿದ ಹಣವೇ ೧೦ ಕೋಟಿ ರೂಗಳಿಗೂ ಹೆಚ್ಚಾಗಿದ್ದು, ಇದುವರೆಗೂ ನಾನ್ನೂರು ಐವತ್ತು ಕೋಟಿ ರೂಗಳಿಗೂ ಹೆಚ್ಚು ಹಣವನ್ನು ಸಾಲ ಪಡೆಯುವುದರೊಂದಿಗೆ, ಶೇ೧೦೦ ರಷ್ಟು ಮರುಪಾವತಿಯನ್ನು ಮಾಡಲಾಗಿದೆ ಎಂದು ಎಲ್ಲರೂ ಇವುಗಳ ಸದುಪಯೋಗ ಪಡೆದುಕೊಂಡು ಸ್ವಉದ್ಯೋಗ, ಸ್ವಶಿಕ್ಷಣ, ಸಬಲೀಕರಣ, ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿರುವರೆಂದು ತಿಳಿಸಿದರು.


ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಗ್ರಾಮಾಂತರ ಜಿಲ್ಲಾ ಸದಸ್ಯರಾದ ಬಲಮುರಿ ಶ್ರೀನಿವಾಸರವರು ಮಾತನಾಡಿ ಬದಲಾದ ಪರಿಸ್ಥಿತಿಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಾರಂಭಿಸಲಾದ ಸ್ತ್ರೀ ಸ್ವಸಹಾಯ ಕೇಂದ್ರಗಳ ಸೇವೆಯಿಂದ ಮಹಿಳೆಯರು ಹೊಸ ಮೈಲುಗಲ್ಲನ್ನು ಸ್ಥಾಪಿಸುವಂತಹವರಾಗಿದ್ದು, ಸರ್ಕಾರದಿಂದ ಜಾರಿಗೊಳಿಸಬೇಕಾದ ಸಾಮಾಜಿಕ ಸೇವಾ ಯೋಜನೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆಗಳ ವತಿಯಿಂದ ಜಾರಿಗೊಳಿಸುವಂತಾದಲ್ಲಿ ಯಾವುದೇ ಮೋಸ, ವಂಚನೆ, ಲಂಚ ಪ್ರಕರಣಗಳು ಇಲ್ಲದೆ ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ನೇರವಾಗಿ ತಲುಪುವಂತಾಗುತ್ತದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಕವಿಯಿತ್ರಿ ಸ್ವರ್ಣ ಗೌರಿ ಮಹದೇವ್ ರವರು ಕೌಟುಂಬಿಕ ಸಾಮರಸ್ಯ ಮತ್ತು ಆಧುನಿಕ ದಿನದಲ್ಲಿ ಕುಟುಂಬ ನಿರ್ವಹಣೆ ಹಾಗೂ ಜವಾಬ್ದಾರಿಯ ವಿಷಯವಾಗಿ ಮಾತನಾಡಿದರು. ವಕೀಲರಾದ ಜೊನ್ನಹಳ್ಳಿ ಟಿ.ಕೆ. ವರಲಕ್ಷ್ಮಿ ರವರು ಮಹಿಳೆಯರ ಹಕ್ಕುಗಳು ಮತ್ತು ಕಾನೂನುಗಳ ಬಗ್ಗೆ ಮಾತನಾಡಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಂಚಾಲಕಿ ಭಾರತೀ ಪ್ರಭುದೇವ್ ರವರು ಮಹಿಳೆಯರ ಆರೋಗ್ಯದ ಬಗ್ಗೆ ತಿಳಿಸಿಕೊಟ್ಟರು.
ಜ್ಞಾನವಿಕಾಸ ಕೇಂದ್ರದ ಜಾಗೃತಿ ಸದಸ್ಯರಾದ ನರಸಿಂಹಮೂರ್ತಿ, ಜ್ಞಾನವಿಕಾಸ ಕೇಂದ್ರದ ಸಂಯೋಜಕರಾದ ದೀಪ, ಕ್ಷೇತ್ರ ಯೋಜನಾಧಿಕಾರಿಗಳಾದ ರವಿರಾಜ್ ನಾಯಕ್, ಸಮನ್ವಯಾಧಿಕಾರಿಗಳಾದ ಹರೀಶ್, ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಕಲಾಂಗರಿಗೆ ವೀಲ್ ಛೇರ್,ಟೈಲರಿಂಗ್ ತರಬೇತಿ ಪಡೆದವರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು, ತಾಲೂಕಿನ ಎಲ್ಲೆಡೆಯಿಂದ ಆಗಮಿಸಿದ್ದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರುಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು