ನಿದ್ದೆಗೆ ಮನೆಮದ್ದು

ಗಸಗಸೆಯನ್ನು ನುಣ್ಣಗೆ ರುಬ್ಬಿ ರಸ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಸಕ್ಕರೆ ಬೆರೆಸಿ ಪ್ರತಿನಿತ್ಯ ಊಟವಾದ ನಂತರ ಕುಡಿಯುತ್ತಾ ಬನ್ನಿ. ಇನ್ನು ಸ್ವಲ್ಪ ಸಮಯವಿದ್ದರೆ ಅಚ್ಚುಕಟ್ಟಾಗಿ ಗಸಗಸೆ ಪಾಯಸ ಮಾಡಿ ಕುಡಿಯಿರಿ ದೇಹಕ್ಕೂ ಮನಸ್ಸಿಗೂ ಹಿತ.
ಹಸಿ ಈರುಳ್ಳಿ ಸಲಾಡ್ ಅನ್ನು ಪ್ರತಿದಿನ ರಾತ್ರಿ ಉಟದೊಡನೆ ತಿನ್ನಿ.
ವಿಟಮಿನ್ ಬಿ ಸತ್ವವುಳ್ಳ ಆಹಾರವನ್ನು ಹೆಚ್ಚಾಗಿ ಸೇವಿಸಿ. ಧಾನ್ಯಗಳು, ಬೆಳೆ ಕಾಳು ಇತ್ಯಾದಿ ನಿಮ್ಮ ರೆಸಿಪಿಯಲ್ಲಿರಲಿ. ನಿದ್ರಾಹೀನತೆ ಹೋಗಿಸಲು ಇದು ಉತ್ತಮ ಆಹಾರ.
?ಉಂಡು ನೂರಡಿ ಇಡುವುದು ಉತ್ತಮ? ಮುಂಜಾನೆ ಹಾಗೂ ಮುಸ್ಸಂಜೆ ವಾಕಿಂಗ್ ತಪ್ಪಿಸಬೇಡಿ.
ಉತ್ತಮ ನಿದ್ದೆ ಬರಲು ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯಿರಿ ಸಾಕು.
ನಿಮ್ಮ ಊಟ, ತಿಂಡಿಯಲ್ಲಿ ಚೆನ್ನಾಗಿ ತುಪ್ಪ ಬೆರೆಸಿ ತಿನ್ನಿ. ಇದು ನಿದ್ದೆ ಬರಿಸುತ್ತದೆ.
ಮುದ್ದೆ ತಿಂದು ನಿದ್ದೆ ಹೋದ ಗೌಡ ಎಂದು ಮಾನ್ಯ ಮಾಜಿ ಪ್ರಧಾನಿಗಳನ್ನು ಆಡಿಕೊಳ್ಳುವುದನ್ನು ಬಿಟ್ಟು, ರಾಗಿ ಮುದ್ದೆ, ರಾಗಿ ಮಾಲ್ಟ್ ಕುಡಿಯುತ್ತಾ ಬಂದರೆ ದೇಹಾಲಸ್ಯ ಕಮ್ಮಿಯಾಗುತ್ತದೆ. ಮನಸ್ಸು ನಿರಾಳವಾಗಿ ನಿದ್ದೆ ಹತ್ತುತ್ತದೆ.
ಮಲಗುವ ಕೋಣೆಯಲ್ಲಿ ಪ್ರಖರವಾದ ಬೆಳಕನ್ನು ಹಾಕಬೇಡಿ. ನಿದ್ರಾ ಸಮಯದಲ್ಲಿ ಮಂದ ಬೆಳಕು ಇರಲಿ.
ರಾತ್ರಿ ಮಲಗುವ ಮುನ್ನ ಕೆಫೈನ್ ಭರಿತ ಕಾಫಿ, ಟೀ ಮುಂತಾದ ಪಾನೀಯಗಳು ಸೇವಿಸುವುದನ್ನು ಬಿಟ್ಟುಬಿಡಿ. ಚಳಿಗಾಲದಲ್ಲಿ ಎಲ್ಲಕ್ಕಿಂತ ಕಷಾಯ ಉತ್ತಮ.
ಮದ್ಯಪಾನ ಸುಲಭ ಉಪಾಯ ಎಂದು ತೋರಿದರೂ ಅದು ಕ್ಷಣಿಕ ಪರಿಹಾರ ಎನ್ನಬಹುದು. ವೈದ್ಯರ ಸಲಹೆ ಮೇರೆಗೆ ಕೊಂಚ ಸೇವಿಸಿ ಮಲಗಿಬಿಡಿ. ಆದರೆ, ಮತ್ತೆ ಮತ್ತೆ ಬಾಟಲಿ ಕಡೆ ವಾಲಬೇಡಿ.
ಮನಸ್ಸಿಗೆ ಹಿತ ಎನಿಸುವ ಸಂಗೀತವನ್ನು ಆಲಿಸಿರಿ ಅಥವಾ ಪುಸ್ತಕವನ್ನು ಓದತೊಡಗಿ ಆದರೆ, ಟಿವಿ ಆನ್ ಮಾಡಿಕೊಂಡು ಕಣ್ಣಿಗೆ ದಣಿವಾಗುವವರೆಗೂ ಕಾಯಬೇಡಿ.
ಒಳ್ಳೆ ನಿದ್ದೆ ಬರಬೇಕಾದರೆ ದೈಹಿಕ ಕಸರತ್ತು ತುಂಬಾ ಮುಖ್ಯ. ಈಜಾಡುವುದು, ನಡಿಗೆ, ಸೈಕಲ್ ತುಳಿಯುವುದು ಮುಂತಾದ ಚಟುವಟಿಕೆಗಳಿಗೆ ಸಾಕಷ್ಟು ಸಮಯ ಕೊಡಿ.
ಹಾಸಿಗೆ ಹಾಗೂ ದಿಂಬು ತುಂಬಾ ಮೃದುವಾಗಿರಬಾರದು ಅಥವಾ ತುಂಬಾ ಒರಟಾಗಿರಬಾರದು. ದಿಂಬು ಇಲ್ಲದೆ ಮಲಗುವ ಅಭ್ಯಾಸವಿದ್ದರೆ ಇನ್ನೂ ಉತ್ತಮ.
ವೈದ್ಯರ ಸಲಹೆ ಮೇರೆಗೆ ನಿದ್ರೆ ಮಾತ್ರೆ ಸೇವಿಸಬಹುದು. ಆದರೆ, ಸ್ವಯಂವೈದ್ಯ ಎಂದಿಗೂ ಕೂಡದು. ಎತ್ತರ ಪ್ರದೇಶದಲ್ಲಿದ್ದಾಗಂತೂ ನಿದ್ರೆ ಮಾತ್ರೆ ಸೇವನೆ ಕೂಡದು.
ಅಂತಿಮವಾಗಿ ಯಾವ ಪ್ಲಾನ್ ವರ್ಕ್ ಔಟ್ ಆಗದಿದ್ದರೆ ಯೋಗ ಹಾಗೂ ಧ್ಯಾನಕ್ಕೆ ಮೊರೆ ಹೋಗಿ. ನೀವು ಬೇಡವೆಂದರೂ ನಿದ್ದೆ ಆವರಿಸುತ್ತದೆ. ಎಷ್ಟು ಅವಧಿ ನಿದ್ರೆ ಮಾಡಿದ್ದೀರಾ ಎಂಬುದು ಮುಖ್ಯವಲ್ಲ. ಎಷ್ಟು ಗಾಢವಾಗಿ ನಿದ್ರೆ ಹೋಗಿದ್ರಿ ಎಂಬುದು ಮುಖ್ಯ ನೆನಪಿಡಿ. ನಿದಿರೆಯೂ ಏಕೋ ಸದಾ ದೂರ ಎಂದು ಗುನುಗುವ ಮನಸು..ರಾತ್ರಿ ಆಯ್ತು ಮಲಗೋಣ ಎನ್ನುತ್ತಾ ನಿದ್ರಾದೇವಿಯ ವಶವಾಗುತ್ತದೆ.