ನಿತ್ಯ 800 ಜನರಿಗೆ ಉಚಿತ ಊಟ

ಬೀದರ: ಮೇ.18:ಮಾನವತಾ ಫೌಂಡೇಶನ್ ಕೋವಿಡ್ ಸೋಂಕಿತರು ಹಾಗೂ ವಾರಿಯರ್ಸ್ ಸೇರಿ ನಿತ್ಯ 800 ಜನರಿಗೆ ಉಚಿತ ಆಹಾರ ಪೂರೈಸುವ ಮೂಲಕ ಗಮನ ಸೆಳೆದಿದೆ.

ಫೌಂಡೇಶನ್‍ನ 16 ಜನ ಸಮಾನ ಮನಸ್ಕ ಸದಸ್ಯರು ಸ್ವಯಂ ಪ್ರೇರಣೆಯಿಂದ ಏಳು ದಿನಗಳಿಂದ ಅನ್ನ ದಾಸೋಹ ನಡೆಸಿಕೊಂಡು ಬರುತ್ತಿದ್ದಾರೆ.

ನಗರದ ಬ್ರಿಮ್ಸ್ ಆಸ್ಪತ್ರೆ ಹಾಗೂ ಖಾಸಗಿ ಕೋವಿಡ್ ಕೇರ್ ಸೆಂಟರ್‍ಗಳಿಗೆ ನಿತ್ಯ ಮಧ್ಯಾಹ್ನ ಊಟ ಸರಬರಾಜು ಮಾಡುತ್ತಿದ್ದಾರೆ. ಬೆಳಿಗ್ಗೆ ಪೊಲೀಸರಿಗೆ ಮಾತ್ರ ಉಪಾಹಾರ ಪೂರೈಸುತ್ತಿದ್ದಾರೆ.

ಸೋಂಕಿತರು ಹಾಗೂ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಾರಿಯರ್ಸ್‍ಗೆ ಆಹಾರಕ್ಕೆ ಸಮಸ್ಯೆ ಆಗದಿರಲಿ ಎನ್ನುವ ಕಾರಣಕ್ಕೆ ಆಹಾರ ಪೊಟ್ಟಣ ಉಚಿತವಾಗಿ ವಿತರಿಸಲಾಗುತ್ತಿದೆ

ಎಂದು ಫೌಂಡೇಶನ್ ಸದಸ್ಯ ಆಕಾಶ ಕರ್ಪೂರ ಹಾಗೂ ಆಕಾಶ ನಾಗಮಾರಪಳ್ಳಿ ತಿಳಿಸಿದರು.

ಸೋಂಕಿತರು ಹಾಗೂ ವಾರಿಯರ್ಸ್‍ಗೆ ಮಧ್ಯಾಹ್ನ ಪ್ಯಾಕ್ ಮಾಡಲಾದ ಎರಡು ಚಪಾತಿ, ಎರಡು ಬಗೆಯ ಪಲ್ಯ, ಅನ್ನ, ಸಾಂಬಾರು ಒಳಗೊಂಡ ಉತ್ತಮ ಗುಣಮಟ್ಟದ ಊಟ ಹಾಗೂ ನೀರಿನ ಬಾಟಲಿ ಕೊಡಲಾಗುತ್ತಿದೆ ಎಂದು ಹೇಳಿದರು.

ಫೌಂಡೇಶನ್ ಸದಸ್ಯರ ಕಾರುಗಳು ಹಾಗೂ ಆಟೊಗಳಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಿಗೆ ಆಹಾರ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.

ಹೈದರಾಬಾದ್‍ನ 10 ಜನ ಪ್ರಸಿದ್ಧ ಬಾಣಸಿಗರಿಂದ ವಿಶಾಲ್ ಫಂಕ್ಷನ್ ಹಾಲ್‍ನಲ್ಲಿ ಆಹಾರ ತಯಾರಿಸಲಾಗುತ್ತಿದೆ. ಇದರಿಂದ ಕೋವಿಡ್ ಕಾರಣ ಸಂಕಷ್ಟಕ್ಕೆ ಸಿಲುಕಿರುವ ಬಾಣಸಿಗರಿಗೆ ಕೆಲಸ ಕೊಟ್ಟಂತೆಯೂ ಆಗಿದೆ ಎಂದು ಹೇಳಿದರು.

ಸಮಾಜ ಸೇವೆ ಉದ್ದೇಶದಿಂದ ಉದ್ಯಮಿ, ಎಂಜಿನಿಯರ್‍ಗಳು ಸೇರಿದಂತೆ 30-32 ವಯಸ್ಸಿನ 16 ಜನ ಯುವಕರು ಸೇರಿ ಬೀದರ್ ಮಾನವತಾ ಫೌಂಡೇಶನ್ ಸ್ಥಾಪಿಸಿದ್ದೇವೆ. ಅನಿಲ್ ಗಂದಗೆ, ಚನ್ನಬಸವ ಮುದ್ದಪ್ಪ, ಹರೀಶ್ ಪಟೇಲ್, ಜಯೇಶ್ ಪಟೇಲ್, ಕೃಷ್ಣಾ ಪಸಾರ್ಗೆ, ನಕುಲ್ ಪಾಟೀಲ ಕಣಜಿ, ನಂದಕಿಶೋರ ಜಹಗೀರದಾರ್, ನಿಖಿಲ್ ರಾಗಾ, ನಿತಿನ್ ಕರ್ಪೂರ, ಪವನ್‍ಸಿಂಗ್ ಠಾಕೂರ್, ಪ್ರಸಾದ ಸಿಂದೋಲ್, ಸಂದೀಪ್ ಪಾಟೀಲ, ಸಂಗಮೇಶ ಸಾಗರ ಬೊಮ್ಮಾ ಹಾಗೂ ವೀರೇಶ ಸ್ವಾಮಿ ಸದಸ್ಯರಲ್ಲಿ ಸೇರಿದ್ದಾರೆ ಎಂದು ತಿಳಿಸಿದರು.

ಕೋವಿಡ್‍ನಿಂದಾಗಿ ತೊಂದರೆಯಲ್ಲಿ ಇರುವವರಿಗೆ ನೆರವಾಗಬೇಕು ಎನ್ನುವ ಉದ್ದೇಶದಿಂದ ಉಚಿತ ಆಹಾರ ಸೇವೆ ಆರಂಭಿಸಿದ್ದೇವೆ. ಲಾಕ್‍ಡೌನ್ ಮುಗಿಯುವವರೆಗೂ ಮುಂದುವರಿಯಲಿದೆ ಎಂದು ಹೇಳಿದರು.