
ಕಲಬುರಗಿ,ಆ 27: ರಾಜ್ಯ ಸರಕಾರದ ಶಕ್ತಿ ಯೋಜನೆ ಜಾರಿಗೊಂಡ ಬಳಿಕ ನಿತ್ಯ 10 ಸಾವಿರಕ್ಕೂ ಅಧಿಕ ಭಕ್ತರು ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದು ಶರಣಬಸವೇಶ್ವರರ ದರ್ಶನ ಪಡೆದು ಪ್ರಸಾದ ಸ್ವೀಕರಿಸುತ್ತಿದ್ದಾರೆ ಎಂದು ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ದಾಕ್ಷಾಯಿಣಿ ಎಸ್.ಅಪ್ಪಾ ಅವರು ಹೇಳಿದರು.
ಇಲ್ಲಿನ ಗಂಗಾನಗರದ ನಿಜಶರಣ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಶನಿವಾರ ಸಂಜೆ ಆರಂಭಗೊಂಡ ಶರಣ ಬಸವೇಶ್ವರ ಮಹಾ ಪುರಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಶರಣಬಸವೇಶ್ವರ ದೇವಾಲಯಕ್ಕೆ ಈಗ ಪ್ರತಿ ತಿಂಗಳು ಸುಮಾರು ಮೂರು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ತಮ್ಮ ಹರಕೆ ತೀರಿಸುತ್ತಿದ್ದಾರೆ. ಶರಣರ ಆಶೀರ್ವಾದದಿಂದ ಜನರ ಬದುಕು ಹಸನಾಗುತ್ತಿದೆ ಎಂದರು.
ಶರಣ ಸಂಸ್ಕøತಿ ಮತ್ತು ದಾಸೋಹ ಸಂಸ್ಕೃತಿಗಳು ಮಾನವ ಜನಾಂಗದಲ್ಲಿ ನೆಮ್ಮದಿ ನೆಲೆಸುವಂತೆ ಪ್ರೇರಣೆ ನೀಡುತ್ತವೆ. ಜಾತಿ ಬೇಧ, ಲಿಂಗ ಬೇಧ ಹಾಗೂ ವರ್ಣ ಮತ್ತು ವರ್ಗ ಬೇಧವಿಲ್ಲದ ಸಂಸ್ಕೃತಿ ಎಂಬುದು ಯಾವುದಾದರೂ ಇದ್ದರೆ ಅದು ಶರಣ ಸಂಸ್ಕತಿ ಎಂದು ಅವ್ವಾಜಿ ವ್ಯಾಖ್ಯಾನಿಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಶರಣಬಸವೇಶ್ವರ ಸಂಸ್ಥಾನದ ಪುಣ್ಯದಿಂದಾಗಿ ಈ ಭಾಗದ ಜನರಲ್ಲಿ ಉತ್ತಮ ಸಂಸ್ಕೃತಿ ಬೇರುಬಿಟ್ಟಿದೆ. ಶಿಕ್ಷಣ ಮತ್ತು ದಾಸೋಹ ಕ್ಷೇತ್ರಕ್ಕೆ ಶರಣಬಸವೇಶ್ವರ ಸಂಸ್ಥಾನದ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಇದಕ್ಕೂ ಮುನ್ನ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರು ಸಮಾರಂಭ ಉದ್ಘಾಟಿಸಿದರು. ಪುಣ್ಯಕೋಟಿ ಆಶ್ರಮದ ಡಾ.ವರಲಿಂಗೇಶ್ವರರು ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ಸಂತೋಷ್ ಎಚ್.ಹುಳಗೇರಿ ಹಾಗೂ ಕಾರ್ಯದರ್ಶಿ ಶಿವಕುಮಾರ್ ನಂದಳ್ಳಿ, ಕೋಲಿ ಸಮಾಜದ ಮುಖಂಡ ಅಮೃತ ಡಿಗ್ಗಿ, ವಿಜಯಕುಮಾರ್ ಹಾವಗಲ್, ಶ್ರೀಕಾಂತ ಆಲೂರ್, ಅಶೋಕ್ ಬಿದನೂರ್, ಮಲ್ಲಣ್ಣ ಕೂಡಿ, ಬಾಬಾಸಾಹೇಬ್ ಕೂಡಿ, ಶಂಕರ ವಸ್ತಾರ ಸೇರಿದಂತೆ ಇನ್ನಿತರರು ಪಾಲ್ಗೊಂಡರು.
ಗದಗ ವೀರೇಶ್ವರ ಪುಣ್ಯಾಶ್ರಮದ ಪಂ.ವೀರೇಶ ಶಾಸ್ತ್ರಿ ಮಲಕೂಡ ಅವರು ಪುರಾಣ ಪ್ರವಚನ ನಡೆಸಿಕೊಟ್ಟರು. ಸಂಗೀತ ಕಲಾವಿದರಾದ ವಿನೋದ ದಸ್ತಾಪುರ ಹಾಗೂ ಅಭಿಲಾಷ್ ಮಠಪತಿ ಪಕ್ಕ ವಾದ್ಯ ಸಾಥ್ ನೀಡಿದರು.
ಶರಣು ಕೌಲಗಿ ಸ್ವಾಗತಿಸಿದರು. ಗೊಲ್ಲಾಳಪ್ಪ ಎಸ್.ಜಮಾದಾರ್ ನಿರ್ವಹಿಸಿದರು.