ನಿತ್ಯ ವಿದ್ಯುತ್ ಕಡಿತ : ಅದಕ್ಕೊಂದು ಕಾರಣ ಸಾಮಾನ್ಯ

ನಗರ – ಜಿಲ್ಲೆ ವಿದ್ಯುತ್ ವ್ಯವಸ್ಥೆ ಸುಧಾರಣೆ : ಜೆಸ್ಕಾಂ ಸಂಪೂರ್ಣ ವಿಫಲ
ರಾಯಚೂರು.ಜು.೧೬- ನಗರದಲ್ಲಿ ವಿದ್ಯುತ್ ವ್ಯವಸ್ಥೆ ಸುಧಾರಣೆ ಮಾಡುವಲ್ಲಿ ಜೆಸ್ಕಾಂ ಸಂಪೂರ್ಣ ವೈಫಲ್ಯದಿಂದ ನಿತ್ಯ ವಿದ್ಯುತ್ ಕಡಿತ ನಗರದ ಜನರ ಪಾಲಿಗೆ ಬೆಂಬಿಡದ ಶಾಪವಾಗಿ ಕಾಡಿದೆ.
ನಗರದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಪ್ರತಿ ನಿತ್ಯ ವಿದ್ಯುತ್ ಕಡಿತಗೊಳಿಸುವುದು ಸಾಮಾನ್ಯವಾಗಿದೆ. ಇದು ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲೂ ಇದೆ ಸ್ಥಿತಿ ಇದೆ. ತಾಲೂಕುಗಳಲ್ಲಂತೂ ಪರಿಸ್ಥಿತಿ ಇನ್ನೂ ದಾರುಣವಾಗಿದೆ. ಪ್ರತಿನಿತ್ಯ ನಗರದಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತದೆಂಬ ವಿಷಯಕ್ಕೆ ಸಂಬಂಧಿಸಿ ಅಧಿಕಾರಿಗಳ ಗಮನಕ್ಕೆ ತಂದಾಗ ನಿತ್ಯ ವಿದ್ಯುತ್ ಕಡಿತ ಸಾಧ್ಯವೆ ಇಲ್ಲವೆಂದು ಪ್ರತಿವಾದಿಸುವ ಅಧಿಕಾರಿಗಳಿಗೆ ಕಳೆದ ಜು.೧೨ ರಿಂದ ಪ್ರತಿ ದಿನದ ವಿದ್ಯುತ್ ಕಡಿತದ ಮಾಹಿತಿಯ ಸಂದೇಶ ಕಳುಹಿಸುವ ಮೂಲಕ ವಿದ್ಯುತ್ ಕಡಿತದ ಸಮಸ್ಯೆಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಇದನ್ನು ಸುಧಾರಿಸುವ ಪ್ರಯತ್ನ ಮಾತ್ರ ಶೂನ್ಯವಾಗಿದೆ.
ಜು.೧೦ ರಂದು ಗೋಶಾಲ್ ರಸ್ತೆಯ ಸಂಪರ್ಕ ಕಲ್ಪಿಸುವ ೮೦ ಅಡಿ ರಸ್ತೆಯಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೂ ವಿದ್ಯುತ್ ಕಡಿತಗೊಳಿಸಲಾಗಿತ್ತು. ನಂತರ ಪ್ರತಿ ದಿನ ವಿದ್ಯುತ್ ಕಡಿತದ ಬಗ್ಗೆ ನಗರದ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಸಂದೇಶ ರವಾನಿಸಲಾಗಿತ್ತು. ಇಲ್ಲಿಯ ಸ್ಥಿತಿಯ ಬಗ್ಗೆ ಸಮಗ್ರ ವರದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಸ್ವತಃ ಪತ್ರಿಕೆಯ ಪ್ರತಿ ರಾಜ್ಯ ಇಂಧನ ಸಚಿವರಿಗೆ ತಲುಪುವಂತೆ ಮಾಡಲಾಗಿತ್ತು. ದುರಂತವೆಂದರೆ ರಾಜ್ಯದ ಇಂಧನ ಮಂತ್ರಿ ಮತ್ತು ಇಲ್ಲಿಯ ಜೆಸ್ಕಾಂ ಸಾರ್ವಜನಿಕರ ಸಮಸ್ಯೆ ಬಗ್ಗೆ ಕನಿಷ್ಟ ಗಮನ ಹರಿಸಿದ ಪರಿಸ್ಥಿತಿಯಲ್ಲಿದ್ದಾರೆ.
ಪ್ರತಿನಿತ್ಯ ವಿದ್ಯುತ್ ಕಡಿತಕ್ಕೆ ಒಂದು ಸಮಜಾಯಿಸಿ ಹೇಳುವ ಅಧಿಕಾರಿಗಳಿಗೆ ವಿದ್ಯುತ್ ಕಡಿತ ನಿಯಂತ್ರಿಸುವ ಪರ್ಯಾಯ ಯೋಜನೆಗಳು ಇಲ್ಲದಿರುವುದು ನಗರ ಸೇರಿದಂತೆ ಜಿಲ್ಲೆಯ ಕಳಪೆ ವಿದ್ಯುತ್ ಪೂರೈಕೆಗೆ ಹಿಡಿದ ಕನ್ನಡಿಯಾಗಿದೆ. ಜೆಸ್ಕಾಂ ಗುಲ್ಬರ್ಗಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕರು ಇದ್ದಾರೆಯೆ? ಎಂದು ಕೇಳುವಂತಹ ಪರಿಸ್ಥಿತಿ ಇಲ್ಲಿಯ ಜನರಲ್ಲಿದೆ. ಜಿಲ್ಲೆ ಅತ್ಯಂತ ಹಿಂದುಳಿದ ಮತ್ತು ಅನೇಕ ಸೌಕರ್ಯ ವಂಚಿತ ಪ್ರದೇಶವಾಗಿದೆ. ಪ್ರಮುಖ ಕೈಗಾರಿಕೆಗಳೆ ಸ್ಥಾಪನೆ ಇಲ್ಲದೆ ಸಣ್ಣಪುಟ್ಟ ವ್ಯಾಪಾರ ವಹಿವಾಟು ಇಲ್ಲಿಯ ಜನರ ಜೀವನವಾಗಿದೆ.
ಬಹುತೇಕ ವರ್ಕ್ ಶಾಪ್‌ಗಳನ್ನು ಇಲ್ಲಿ ಆರ್ಥಿಕ ಮತ್ತು ಔದ್ಯೋಗಕ್ಕೆ ಅವಲಂಬಿತರಾಗಿದ್ದಾರೆ. ಪ್ರತಿನಿತ್ಯ ವಿದ್ಯುತ್ ಕಡಿತದಂತಹ ಘಟನೆಗಳಿಂದ ಸಣ್ಣ ಪುಟ್ಟ ವರ್ಕ್ ಶಾಪ್‌ಗಳು ಆರ್ಥಿಕ ನಷ್ಟಕ್ಕೆ ಗುರಿಯಾಗುವಂತಾಗಿದೆ. ಜೆಸ್ಕಾಂ ಕುಂದುಕೊರತೆ ಸಭೆಗಳು ನಿರ್ವಹಿಸುವ ಅಧಿಕಾರಿಗಳಿಗೆ ಪ್ರತಿ ನಿತ್ಯ ವಿದ್ಯುತ್ ಕಡಿತದಂತಹ ಘಟನೆಗಳು ನಡೆದರೆ, ಇದರಿಂದ ಜನರು ಯಾವ ರೀತಿಯ ಸಮಸ್ಯೆಗೆ ಗುರಿಯಾಗುತ್ತಾರೆಂಬ ಕನಿಷ್ಟ ಜ್ಞಾನವೂ ಇಲ್ಲದ ದುರಾಡಳಿತ ನಡೆಯುತ್ತಿದೆ. ರಾಜ್ಯ ಇಂಧನ ಮಂತ್ರಿಯಂತೂ ಜಿಲ್ಲೆಗೆ ಬರುವುದಿಲ್ಲ.
ಇಲ್ಲಿಯ ಅಧಿಕಾರಿಗಳಿಗೆ ನಿತ್ಯ ವಿದ್ಯುತ್ ಸುಧಾರಿಕೆಯ ಪರಿಸ್ಥಿತಿ ನಿಭಾಯಿಸುವ ಕಾಳಜಿ ಇಲ್ಲ. ಆಡಳಿತರೂಢ ಸಂಸದ, ಶಾಸಕರಿಗೆ ತಮಗೆ ಮತ ನೀಡಿದ ಜನರ ವಿದ್ಯುತ್ ಬಗ್ಗೆ ತಿಳಿಯುವ ಸಮಯವಿಲ್ಲ. ಇಂತಹ ಪರಿಸ್ಥಿತಿಯ ಮಧ್ಯೆ ಜನರು ವಿದ್ಯುತ್ ಕಡಿತದ ಸಮಸ್ಯೆಗೆ ಹೊಂದಿಕೊಳ್ಳುವ ಮನಸ್ಥಿತಿಯೊಂದಿಗೆ ವಿದ್ಯುತ್ ಕಡಿತದ ಮಧ್ಯೆ ಬದುಕುವುದನ್ನು ರೂಢಿಸಿಕೊಂಡಿದ್ದಾರೆ.