ನಿತ್ಯ ಜೀವನದಲ್ಲಿ ಕಾನೂನು ಅವಶ್ಯಕ: ನ್ಯಾ.ಮೋಹಿತೆ

ವಾಡಿ:ನ.10: ಪ್ರತಿಯೊಬ್ಬರು ನಿತ್ಯ ಜೀವನಕ್ಕೆ ಅನ್ವಯವಾಗುವ ಕಾನೂನು ತಿಳಿದುಕೊಂಡು ಪಾಲನೆ ಮಾಡಬೇಕು ಅಂದಾಗಲೇ ನಾಗರೀಕ ಸಮಾಜಕ್ಕೆ ಮಹತ್ವ ಬರುತ್ತದೆ ಎಂದು ಶಹಬಾದ ಕಿರಿಯಶ್ರೇಣಿ ಗೌರನ್ವಾಯುತ ನ್ಯಾಯಧೀಶರಾದ ಮಲ್ಲೇಶಿ ಪರಶುರಾಮ ಮೋಹಿತೆ ಹೇಳಿದರು.

ಪಟ್ಟಣ ಸಮೀಪದ ರಾವೂರ ಗ್ರಂಥಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕ ಸೇವಾ ಸಮಿತಿ ಚಿತ್ತಾಪೂರ, ನ್ಯಾಯವಾದಿಗಳ ಸಂಘ ಶಹಾಬಾದ, ಗ್ರಾಮ ಪಂಚಾಯತ ರಾವೂರ, ಕಂದಾಯ ಇಲಾಖೆ ಶಹಾಬಾದ, ತಾಲ್ಲೂಕ ಪಂಚಾಯತ ಶಹಾಬಾದ, ಪೋಲಿಸ್ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಕ್ ಹಮಾರಾ ತೋ ಬಿ ಹೈ @ 75 ಎಂಬ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಬಾಲ್ಯ ವಿವಾಹವು ಅಪರಾಧವಾಗಿದ್ದು, ಬಾಲ್ಯ ವಿವಾಹವನ್ನು ತಡೆಗಟ್ಟುವ ಜವಬ್ದಾರಿ ಎಲ್ಲರ ಮೇಲಿದೆ. ಜನನ ಮರಣ ನೊಂದಣೆ ಕಾಯ್ದೆ, ಮೋಟಾರು ವಾಹನ ಕಾಯ್ದೆ ಕುರಿತು ಸವಿಸ್ತಾರವಾಗಿ ತಿಳಿಸಿದರು.

ಹಿರಿಯ ನ್ಯಾಯವಾದಿ ಎಸ್‍ಎಟಿ ಕಾಯ್ದೆ, ಅತುಲ್ ಎಂ. ಯಲಶೆಟ್ಟಿ ಗ್ರಾಹಕರ ಹಕ್ಕು ಮತ್ತು ಮಾಹಿತಿ ಹಕ್ಕು ಅಧಿನಿಯಮ ಕುರಿತು ಮಾತನಾಡಿದರು. ಶಹಾಬಾದ ನ್ಯಾಯವಾದಿ ಸಂಘದ ಕಾರ್ಯದರ್ಶಿ ಡಿ.ಸಿ ಕುಲಕುಂದಿಕರ, ಪಂಚಾತಯ ಅಭಿವೃಧ್ದಿ ಅಧಿಕಾರಿ ನಾಗಚಿತ್ರ, ಗ್ರಾ.ಪಂ ಅಧ್ಯಕ್ಷೆ ದೇವಕಿ ಮಿನಿಗಿಲೇರ್, ಮಾಜಿ ಜಿ.ಪಂ ಸದಸ್ಯ ಗುಂಡಣ್ಣ ಬಾಳಿ, ವಕೀಲರಾದ ಈಶ್ವರ ಅಳ್ಳೋಳ್ಳಿ, ಚಂದ್ರಶೇಖರ ಅಂಗಡಿ ಸೇರಿದಂತೆ ಗ್ರಾ.ಪಂ ಸದಸ್ಯರು, ಸಿಬ್ಬಂದಿಗಳು ಇದ್ದರು. ವಕೀಲರಾದ ಮಲ್ಲಿಕಾರ್ಜುನ ಹೊನಗುಂಟಿ ನಿರೂಪಿಸಿದರು. ವಕೀಲ ಮಲಿಕಪಾಶಾ ಮೌಜನ ವಂದಿಸಿದರು.