ನಿತ್ಯ ಜೀವನಕ್ಕೆ ಕಾನೂನು ತಿಳುವಳಿಕೆ ಅಗತ್ಯ- ವೈ.ಎಲ್ ಲಾಡಖಾನ್

ಅರಕೇರಾ.ನ.೬-ದೇಶದ ಕಾನೂನು ಪ್ರತಿಯೊಬ್ಬ ವ್ಯಕ್ತಿಗೂ ಸರಿಸಮ. ಕಾನೂನಿಗೆ ಮಿಗಿಲಾದದ್ದು ಯಾವುದೂ ಇಲ್ಲ. ಅದನ್ನು ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವೈ.ಎಲ್. ಲಾಡಖಾನ್ ಹೇಳಿದರು.
ಅವರು ಅರಕೇರಾ ಗ್ರಾಮದಲ್ಲಿನ ಶ್ರೀ ಸಿದ್ದಯ್ಯ ಹವಲ್ದಾರ ಸರಕಾರಿ ಪ್ರೌಢ ಶಾಲೆಯಲ್ಲಿ ತಾಲೂಕ ಕಾನೂನು ಸೇವಾ ಸಮಿತಿ, ತಾಲೂಕ ನ್ಯಾಯವಾದಿಗಳ ಸಂಘ ಹಾಗೂ ತಾಲೂಕ ಆಡಳಿತ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಅನಕ್ಷರತೆ ಹಾಗೂ ಬಡತನದಿಂದಾಗಿ ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಅರಿವು ಇಲ್ಲ. ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾನೂನು ಪ್ರಾಧಿಕಾರ ಅಸ್ತಿತ್ವದಲ್ಲಿವೆ. ಉಚಿತವಾಗಿ ಕಾನೂನು ಸೇವೆಯನ್ನು ಪಡೆಯಲು ಅವಕಾಶವಿದೆ ಎಂದು ಸಲಹೆ ನೀಡಿದರು.
ತಾಲೂಕ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಕೋಲ್ಕಾರ್ ಮಾತನಾಡಿ, ಭಯದ ವಾತಾವರಣದಲ್ಲಿ ಜೀವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ನಿತ್ಯದ ಚಟುವಟಿಕೆಗಳನ್ನು ನೆಮ್ಮದಿಯಾಗಿ ನಡೆಸಲು ಕಾನೂನಿನ ಅರಿವು ಪಡಿಯುವುದು ಅಗತ್ಯ ಎಂದರು.
ಸಾಮಾನ್ಯ ಕಾನೂನುಗಳ ಕುರಿತು ಹಿರಿಯ ವಕೀಲರಾದ ಪ್ರಕಾಶ ಅಬಕಾರಿ ಮಾತನಾಡಿದರು. ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ ಕಾಯ್ದೆ ಬಗ್ಗೆ ತಾಲೂಕು ವೈದ್ಯಾಧಿಕಾರಿ ಬನದೇಶ್ವರ ಜಾಗೃತಿ ಮೂಡಿಸಿದರು. ಮಾನವ ಕಳ್ಳಸಾಗಾಣೆ ತಡೆಗಟ್ಟುವಿಕೆ ಕುರಿತು ಪಿಐ ಎಚ್.ಬಿ ಸಣ್ಣಮನಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀನಿವಾಸ ಚಾಪೆಲ್, ಹಿರಿಯ ಮುಖಂಡರಾದ ಕೆ.ಅನಂತರಾಜ ನಾಯಕ, ಗ್ರಾಪಂ ಅಧ್ಯಕ್ಷೆ ಭಗಮ್ಮ ಮುದುಕಪ್ಪ, ಹಿರಿಯ ವಕೀಲರಾದ ವಿ.ಎಂ ಮೇಟಿ, ಅಬಕಾರಿ ಪ್ರಕಾಶ, ತಾಲೂಕು ವೈದ್ಯಾಧಿಕಾರಿ ಬನದೇಶ್ವರ, ಬಿಇಒ ಡಾ.ಆರ್,ಇಂದಿರಾ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ತಾಯಪ್ಪ ನಾಯಕ, ಪಿಐ ಎಚ್.ಬಿ ಸಣ್ಣಮನಿ, ಪ್ಯಾನಲ್ ವಕೀಲ ವೆಂಕಟೇಶ ಹಾಳಜಾಡಲದಿನ್ನಿ, ಪಿಡಿಒ ಬೂದೆಪ್ಪ ಯಾದವ್, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಕರ್ನಾಳ ಮತ್ತೀತರರಿದ್ದರು.