ಬೆಂಗಳೂರು: ವಾರ್ಷಿಕ ಎಲೆಕ್ಟ್ರಿಕ್ ಸೋಲಾರ್ ವಾಹನಗಳ ರಾಷ್ಟ್ರೀಯ ಸ್ಪರ್ಧೆಯಲ್ಲಿ (ಇ.ಎಸ್.ವಿ.ಸಿ ೨೦೨೩) ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಿರ್ಮಿತವಾದ ವಾಹನ ಹಾಗೂ ಅನ್ವೇಷಕರ ತಂಡಕ್ಕೆ ವೀಕ್ಷಕರ ಆಯ್ಕೆ ವಿಭಾಗದಲ್ಲಿ ‘ಪೀಪಲ್ಸ್ ಚಾಯ್ಸ್ ಅವಾರ್ಡ್ ಮುಡಿಗೇರಿಸಿದೆ.
ಏಷಿಯಾದಲ್ಲಿಯೇ ಅತ್ಯಂತ ಬೃಹತ್ ಆದ ಸೌರಶಕ್ತಿ ವಾಹನಗಳ
ಸ್ಪರ್ಧೆ ಇದಾಗಿದ್ದು, ಗ್ರೇಟರ್ ನೋಯ್ಡಾದ ಗಲ್ಗೋತಿಯಾಸ್ ವಿಶ್ವವಿದ್ಯಾಲಯವತಿಯಿಂದ ಇಂಪೀರಿಯಲ್ ಸೊಸೈಟಿ ಆಫ್ ಇನ್ನೋವೇಟಿವ್ ಇಂಜಿನಿರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಸೌರಶಕ್ತಿಯ ವಾಹನ ನಿರ್ಮಾಣದ ಹೊಣೆ ಹೊತ್ತಿರುವ ಶಿಕ್ಷಕ-ವಿದ್ಯಾರ್ಥಿ ಒಕ್ಕೂಟ ‘ಟೀಂ ಹೋರಸ್’, ಅತ್ಯುತ್ತಮ ವಿನ್ಯಾಸ ಪ್ರಶಸ್ತಿ, ಅತ್ಯುತ್ತಮ ಔದ್ಯಮಿಕ ಪ್ರಶಸ್ತಿ ಹಾಗೂ ಭವಿಷ್ಯದ ಭರವಸೆಯ ಪ್ರಶಸ್ತಿಗಳನ್ನು ಪಡೆದಿದೆ.
ಈ ಸಂಬಂಧ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಿ ಸ್ಪರ್ಧಿಗಳಿಗೆ ಗೌರವ ಸನ್ಮಾನಿಸಲಾಯಿತು.
ಈ ವೇಳೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ‘ಟೀಂ ಹೋರಸ್’ನ ಶಿಕ್ಷಕ ಸಂಯೋಜಕ ಡಾ. ಎಲ್. ಹರೀಶ್ ಕುಮಾರ್ ಅವರು ಮಾತನಾಡಿ, ‘ಹೆಚ್ಚುತ್ತಿರುವ ತಾಪಮಾನದ ಕಾರಣ, ಸಾಂಪ್ರದಾಯಿಕ ಇಂಧನ ಮೂಲಗಳ ಬಳಕೆಯನ್ನು ಕಡಿಮೆ ಮಾಡಿ, ಶುದ್ಧ ವಾತಾವರಣಕ್ಕೆ ಅನುವು ಮಾಡಿಕೊಡಿಕೊಟ್ಟು ನೈಸರ್ಗಿಕ ಇಂಧನ ಮೂಲಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ, ೨೦೧೭ರಲ್ಲಿ ‘ಟೀಂ ಹೋರಸ್’ ಕಾರ್ಯಪ್ರವೃತ್ತವಾಗಿತ್ತು.. ಈ ತಂಡ ನಿರ್ಮಿಸಿದ ಸೌರಶಕ್ತಿಯ ವಾಹನ ದೆಹಲಿ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಸಂಚರಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದೆ ಹಾಗೂ ಜಗತ್ತಿನ ಗಮನ ಸೆಳೆದಿದೆ’, ಎಂದು ತಿಳಿಸಿದರು.
ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಮಾತನಾಡಿ, ನಮ್ಮ ಸಂಸ್ಥೆ ನವೀಕರಿಸಬಹುದಾದ ಇಂಧನ, ವಿದ್ಯುತ್ ಚಾಲಿತ ವಾಹನ, ಸೌರಶಕ್ತಿಯ ವಾಹನ ಇತ್ಯಾದಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಸಾದರ ಪಡಿಸಲು ಉತ್ತಮ ಅವಕಾಶ ಕಲ್ಪಿಸಿದೆ. ಆರು ವರ್ಷಗಳ ಹಿಂದೆ ಪ್ರಾರಂಭವಾದ ಈ ಪ್ರಯತ್ನ ಇಂದು ಫಲ ನೀಡಿದೆ. ರಾಷ್ಟ್ರ ಮಟ್ಟದಲ್ಲಿ ನಮ್ಮ ಅನ್ವೇಷಣೆಗಳಿಗೆ ಮಾನ್ಯತೆ ದೊರೆತಿದೆ ಎಂದು ಹೇಳಿದರು.
ಸಮಾರಂಭದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಶೈಕ್ಷಣ ಕ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀಧರ್ ಹಾಗೂ ಅಕೆಡೆಮಿಕ್ ನಿರ್ದೇಶಕ ಡಾ. ಸಂದೀಪ್ ಶಾಸ್ತ್ರಿ ಉಪಸ್ಥಿತರಿದ್ದರು.