ನಿಜ ಸುಖಿ ಶರಣ ಹಡಪದ ಅಪ್ಪಣ್ಣ

 ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿ ಒಂದು ನವ ಮನ್ವಂತರಕ್ಕೆ ನಾಂದಿಯಾಗಿ ಇಂದಿಗೂ ಮಾನವನ ಸರ್ವತೋಮುಖ ವಿಕಾಸಕ್ಕೆ ಒಂದು ಸಂಜೀವಿನಿ ಯಾಗಿದೆ .ಬಸವಾದಿ ಶರಣರು ಅಂದು ನೆಟ್ಟ ಮಾನವ ಕುಲದ ಚಿರಂತನ ಮೌಲ್ಯಗಳಾದ ಸಮತೆ, ಸ್ವಾತಂತ್ರ್ಯ ,ಸ್ವಾಭಿಮಾನ ಮತ್ತು ಭ್ರಾತೃತ್ವದ ಬೀಜಗಳು ಅವರ ನಡೆ -ನುಡಿ ಸಿದ್ಧಾಂತದ ಕಾರಣ ಕಾಯಕ -ದಾಸೋಹ ವಿಚಾರ-  ಆಚಾರದ ಅನುಷ್ಠಾನದ ಕಾರಣ ಆಗಲೇ ಸಮೃದ್ಧಿಯ ಫಸಲು ನೀಡಿದ ಅಮೃತ ಕಾಲ.ಒಬ್ಬ ಮನುಷ್ಯನಿಗೆ ಬೆಲೆ ಬರುವುದು ಆತನ ಹುಟ್ಟಿನಿಂದಲ್ಲ, ಜಾತಿಯಿಂದಲ್ಲ,ಬದಲಾಗಿ ಆತನ ಸತ್ಯ, ಶುದ್ಧ ಕಾಯಕದಿಂದ. ಕಾಯಕವೇ ಕೈಲಾಸ ಎಂದು ಜಗತ್ತಿಗೆ ಸಾರಿದವರು ಶರಣರು. ಮೇಲು- ಕೀಳು ಉಳ್ಳವ- ಇಲ್ಲದವ, ಸ್ಪ್ರಶ್ಯ – ಆಸ್ಟ್ರಶ್ಯ ,ಹೆಣ್ಣು -, ಗಂಡು,ಪ್ರಾಂತ- ಪ್ರದೇಶ, ಹಿರಿಯ -ಕಿರಿಯ ಯಾವ ತರತಮದ ಭಾವನೆಗಳಿಗೂ ಸೊಪ್ಪು ಹಾಕದೆ ಸಕಲರಿಗೆ ಲೇಸ ಬಯಸುವವನೇ ಶರಣ ಎಂದು ಸಾರಿದವರು. ನುಡಿದಂತೆ ನಡೆದು ನಿಜದಾರಿತೋರಿದವರು ಹಾಗಾಗಿಯೇ ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದು ಹೆಸರಾದ ಅನುಭವ ಮಂಟಪದಲ್ಲಿ ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ ,ಮೋಳಿಗೆಯ ಮಾರಯ್ಯ, ಮೇದಾರ ಕೇತಯ್ಯ, ಸಮಗಾರ ಹರಳಯ್ಯ ,ಸೊನ್ನಲಗದ  ಸಿದ್ದರಾಮ ಹೀಗೆ ವಿವಿಧ  ಸ್ತರದ ಶರಣರಿಗೆ ಅಲ್ಲಿ ಅವಕಾಶ ದೊರೆಯಿತು.ಸಮಾನತೆಯ ತತ್ವ ಪಸರಿಸಿತು.ಹಡಪದ ಅಪ್ಪಣ್ಣನವರು 12ನೆಯ ಶತಮಾನದ ವಚನ ಚಳುವಳಿ, ಸಾಮಾಜಿಕ ಕ್ರಾಂತಿಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದವರು. ಬಸವಣ್ಣನವರ ಬಾಲ್ಯದ ಒಡನಾಡಿಯಾಗಿ ,ನಂತರ ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಅಪ್ಪಣ್ಣ ಎತ್ತರೆತ್ತರಕ್ಕೆ ಬೆಳೆದ ಪರಿ ಅದ್ಭುತ .ಕಷ್ಟ ಸುಖಗಳೆರಡರಲ್ಲೂ ಅಪ್ಪಣ್ಣ ಬಸವಣ್ಣನವರಿಗೆ ಸಮಭಾಗಿ. ಹಡಪದ ಅಪ್ಪಣ್ಣನವರ ಜೀವನ ನಿಷ್ಠೆ, ಸೇವಾ ನಿಷ್ಠೆ ,ಕಾಯಕ ನಿಷ್ಠೆಗಳು ಆದರ್ಶಪ್ರಾಯ ,ಆನಂದಮಯ. ಹಾಗಾಗಿಯೇ ಸ್ವತಃ ಬಸವಣ್ಣನವರುಅಪ್ಪಣ್ಣನನ್ನು ನಿಜಸುಖಿ  ಶರಣ ಎಂದು ಕರೆದಿರುವುದು ಒಂದು ಹೆಗ್ಗಳಿಕೆ.ಅಪ್ಪಣ್ಣನವರು  ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕು ಮಸಬಿನಾಳ ಗ್ರಾಮದಲ್ಲಿ ಜನಿಸಿದರು .ತಂದೆ ಚನ್ನಬಸಪ್ಪ.ತಾಯಿ ದೇವಕಮ್ಮ.ಕ್ರಿ. ಶ. 1160 ಇವರ ಕಾಲಮಾನ. ಹಡಪದ ಮನೆತನ .ಹಡಪ ಎನ್ನುವ ಪದಕ್ಕೆ ವಿಭಿನ್ನ ಅರ್ಥಗಳು. ಎಲೆ,ಅಡಿಕೆ ತಾಂಬೂಲ ಇಟ್ಟುಕೊಳ್ಳುವ ಚೀಲ, ತಾಂಬೂಲ ಕರಂಡ  ಎನ್ನುವ ಅರ್ಥ ಒಂದಾದರೆ, ಗಡ್ಡ, ಮೀಸೆ, ತಲೆ ಕೂದಲನ್ನು ಕತ್ತರಿಸುವ ಕೆಲಸಕ್ಕಾಗಿ ಬಳಸುವ ಸಲಕರಣೆಗಳನ್ನು ಇಡುವ ಚೀಲ ಎನ್ನುವ ಅರ್ಥ ಇನ್ನೊಂದು ಕಡೆ.  ಹಾಗಾಗಿ ಅವರ ವೃತ್ತಿಯ ಬಗ್ಗೆ ಈಗಲೂ ಕೆಲವರಲ್ಲಿ ಗೊಂದಲವಿದೆ . ಅದೇನೇ ಇರಲಿ, ಬೆಳಿಗ್ಗೆ ಎದ್ದ ತಕ್ಷಣ ಹಡಪದ ಅವರ ಮುಖ ನೋಡಬಾರದೆಂಬ ತಪ್ಪು ಕಲ್ಪನೆ ಆಗಿನ ಜನರಲ್ಲಿತ್ತು.ಈ ಮೂಡನಂಬಿಕೆಯನ್ನು ಹೋಗಲಾಡಿಸಲು ಅಣ್ಣ ಬಸವಣ್ಣನವರು ಅನುಭವ ಮಂಟಪದಲ್ಲಿ ಹೊಸ ಕಟ್ಟಳೆಯನ್ನು ಮಾಡಿದರು .ಅದೇನು ಗೊತ್ತೇ? ಯಾರೇ ತಮ್ಮನ್ನು ನೋಡಲು ಬರಲಿ, ಅವರು ಮೊದಲು ಅಪ್ಪಣ್ಣನನ್ನು ಭೇಟಿಯಾಗಿ ಬರಬೇಕೆಂಬ ನಿಯಮ ಅದು. ಶರಣರ ಸರಿ ನಡೆಗೆ ಇಂತಹ ನೂರೊಂದು ಉದಾಹರಣೆಗಳು ಆದರ್ಶಗಳು ನಮಗೆ  ಕಂಡಾವು.ಅಪ್ಪಣ್ಣನವರ ವ್ಯಕ್ತಿತ್ವ ಶರಣ ಸಮೂಹದಲ್ಲಿಯೇ ಎತ್ತರೆತ್ತರ . ಅಲ್ಲಮಪ್ರಭುಗಳು ಕಲ್ಯಾಣದ ಬಸವಣ್ಣನವರ ಮಹಾಮನೆಯ ಎದುರು ನಿಂತಾಗ ಅಪ್ಪಣ್ಣನವರು ನಿರ್ವಹಿಸಿದ ಚಾಣಾಕ್ಷತೆ ಅಪರೂಪದ್ದು .ಅದೇ ರೀತಿ ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣನವರು ಕಲ್ಯಾಣವನ್ನು ತೊರೆದಾಗ ಅವರ ಸಹವರ್ತಿಯಾಗಿ ,ನೆರಳಂತೆ ಹಿಂಬಾಲಿಸಿದವರು ಅಪ್ಪಣ್ಣನವರು. ಬಸವಣ್ಣನವರು ಸಂಗಮನಾಥನಲ್ಲಿ ಐಕ್ಯತೆಯನ್ನು ಪಡೆಯುವುದರ ಜೊತೆಗೆ ನೀಲಾಂಬಿಕೆಯೂ ಇಲ್ಲಿ ಐಕ್ಯವಾಗಲಿ ಎಂದು  ನೀಲಾಂಬಿಕೆ ಕರೆತರಲು ಅಪ್ಪಣ್ಣನನ್ನು ಕಲ್ಯಾಣಕ್ಕೆ ಕಳುಹಿಸಿದ್ದು, ಅಪ್ಪಣ್ಣ ಅಲ್ಲಿನ ಪ್ರಕರಣವನ್ನು ತಂದು ಬಸವಣ್ಣನವರಿಗೆ ತಿಳಿಸಿದ ರೀತಿ ಅಪ್ಪಣ್ಣನ ನಿಶಿತಮತಿಗೆ ,ಸೂಕ್ಷ್ಮತೆಗೆ, ಲಿಂಗಾನುಸಂದಾನದ ಶಕ್ತಿಗೆ ಹಿಡಿದ ಕೈಗನ್ನಡಿ.ವಚನಗಳ ರಚನೆಯಲ್ಲಿ ಅಪ್ಪಣ್ಣನವರ  ಕೊಡುಗೆ ಅಪಾರವಾದುದು, ಇವರ ವಚನಗಳು ಮಂತ್ರ ಗೋಪ್ಯ ಮತ್ತು ಬೆಡಗಿನ ವಚನಗಳಾಗಿ  ಪ್ರಸಿದ್ಧಿ ಪಡೆದಿವೆ. ಬಸವ ಪ್ರಿಯ ಕೂಡಲ ಚನ್ನ ಬಸವಣ್ಣ ಅಂಕಿತದಲ್ಲಿ ಅಪ್ಪಣ್ಣನವರು ಬರೆದಿರುವ 251ಕ್ಕು ಹೆಚ್ಚು ವಚನಗಳು ಇದುವರೆಗೆ ಬೆಳಕಿಗೆ ಬಂದಿದೆ.ಅಪ್ಪಣ್ಣ ತಂಗಡಗಿಯ ಲಿಂಗಮ್ಮನವರನ್ನು ಧರ್ಮಪತ್ನಿಯಾಗಿ ಸ್ವೀಕರಿಸಿದ ಶರಣ. ನಿಜ ಮುಕ್ತೆ ಯಾದ ಲಿಂಗಮ್ಮನವರು ವಿಚಾರಮತಿಯಾಗಿ ,ಪತಿಯನ್ನು ಅನುಸರಿಸಿ ಬರೆದ 114 ವಚನಗಳು ಮುತ್ತಿನಂತಹವು. ಲಿಂಗಮ್ಮನವರ ವಚನಗಳ ಅಂಕಿತನಾಮ ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ.ಅಪ್ಪಣ್ಣನವರ ವಚನಗಳು ನೋಡಲು ಸರಳ ‘ಸುಂದರ’ ಆದರೆ ವಿಚಾರ ಪರತೆಯ  ಗಣಿಯೇ ಅಪ್ಪಣ್ಣನವರ ವಚನಗಳಲ್ಲಿದೆ.ಅಪ್ಪಣ್ಣನವರ ಒಂದು ವಚನ ಇಂತಿದೆ .

ಶೀಲವಂತರು, ಶೀಲವಂತರು ಎಂಬರು.

ಶೀಲವಂತಿಕೆಯನಾರು ಬಲ್ಲರು ಹೇಳಾ ?

ನೆಲಕ್ಕೆ ಶೀಲವೆಂಬೆನೆ

ಹೊಲೆ ಹದಿನೆಂಟು ಜಾತಿ ನಡೆ-ನುಡಿವುದಕ್ಕೆ ಒಂದೇ ಆಗಿತ್ತು, ಜಲಕೆ  ಶೀಲವೆಂಬನೆ, 

ಮೀನ ಮೊಸಳೆಗಳು ಖಗಮೃಗಗಳು ನಿಂದೆಂಜಲು,ಬೆಳೆಗೆ ಶೀಲವೆಂಬೆನೆ

ಎತ್ತು, ಕತ್ತೆ ತಿಂದು ಮಿಕ್ಕ ಎಂಜಲು 

ಹೊನ್ನಿಗೆ ಶೀಲವೆಂಬೇನೆ

 ಊರ ಹೊರೆಯಾಗಿಪ್ಪುದು

 ಹೆಣ್ಣಿಗೆ ಶೀಲವೆಂಬೆನೆ

 ಕಣ್ಣುಗೆಡಿಸಿ ಕಾಡುತ್ತಿಪ್ಪುದು

ಇನ್ನಾವುದು ಶೀಲ ಹೇಳಿರಣ್ಣಾ

ಇದಕ್ಕೆ ಒಳಗಾದವರೆಲ್ಲ ದುಃಶೀಲರು

ಇದ ಹಿಡಿದು ಹಿಡಿಯದೆ,

 ಬಿಟ್ಟುಬಿಡದೆ ತನ್ನ ಮನಕ್ಕೆ 

 ಶೀಲವಾಗಿಪ್ಪದೇ ಅಚ್ಚಶೀಲಕಣಾ 

ಬಸವ ಪ್ರಿಯ  ಕೂಡಲ ಚನ್ನ ಬಸವಣ್ಣ 

ಇಂತಹುದೇ  ವೈಚಾರಿಕತೆಯ ಮುತ್ತು ರತ್ನಗಳು ಅಪ್ಪಣ್ಣನವರ  ವಚನಗಳು . ಅವೆಲ್ಲವನ್ನು ಓದುವ ಭಾಗ್ಯ ನಮ್ಮದಾಗಲಿ.

 ಅಪ್ಪಣ್ಣ ನಾಡಿನ ತುಂಬೆಲ್ಲ ಹೆಸರಾಗಿದ್ದಾರೆ ಎಂಬುದಕ್ಕೆ ಬನವಾಸಿಯ ಮುಧುಕೇಶ್ವರ ಶಿವೋತ್ಸವ ಮಂಟಪದ ಗಗ್ಗರಿ ಕಲ್ಲಿನ ಮೇಲೆ ಇರುವ ಶರಣರ ಸಾಲಿನಲ್ಲಿ ಅಪ್ಪಣ್ಣನವರ ಚಿತ್ರವೂಇದೆ ಎಂಬುದು ಒಂದು ಸಾಕ್ಷಿ ಯಾಗಿ ನಿಲ್ಲುತ್ತದೆ. ಈಗ ಪ್ರತಿ ವರ್ಷ ಕರ್ನಾಟಕ ಸರ್ಕಾರವು ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಪ್ರಾರಂಭಿಸಿದ್ದು ಆ ಮೂಲಕವಾದರೂ ಇವರ ವಚನ ಸಾಹಿತ್ಯ ಎಲ್ಲರ ಮನೆ, ಮನ ಬೆಳಗುವಂತಾಗಲಿ.

*******************************

ಎನ್.  ಟಿ. ಎರ್ರಿ ಸ್ವಾಮಿ

ನಿವೃತ್ತ ಕೆನರಾ ಬ್ಯಾಂಕ್ ಲೀಡ್ ಬ್ಯಾಂಕ್  ಡಿ ಎಂ.

ಜಗಳೂರು 9901909672

.