ನಿಜಶರಣ ಅಂಬಿಗರ ಚೌಡಯ್ಯ-ಮಡಿವಾಳ ಮಾಚಿದೇವ ಜಯಂತಿ ಆಚರಣೆ 

ಸಂಜೆವಾಣಿ ವಾರ್ತೆ

ದಾವಣಗೆರೆ, ಫೆ.7: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ದಾವಣಗೆರೆ ತಾಲೂಕು ಘಟಕ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಅರಸಾಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಶರಣರಾದ ಅಂಬಿಗರ ಚೌಡಯ್ಯ ಮತ್ತು ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಇತ್ತೀಚಿಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯರಾದ ಶರಣ ಕೆ.ಎಚ್.ಮಂಜುನಾಥ ರೆಡ್ಡಿ  ಉದ್ಘಾಟಿಸಿ ಮಾತನಾಡಿ, ಶರಣ ಸಾಹಿತ್ಯ ಕಂದಾಚಾರ, ಮೂರ್ತಿ ಪೂಜೆ ಇವುಗಳನ್ನು ಒಪ್ಪುವುದಿಲ್ಲ, ಕನ್ನಡ ಸಾಹಿತ್ಯದಲ್ಲಿಯೇ ವಚನ ಸಾಹಿತ್ಯ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಹೇಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶರಣರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಪ್ರಮುಖ ಭಾಗವಾದ ದತ್ತಿ ಉಪನ್ಯಾಸದ ಅನುಭಾವ ನುಡಿಯ ಅಡಿಯಲ್ಲಿ “ವಚನ ಸಾಹಿತ್ಯದಲ್ಲಿ ವೈಚಾರಿಕತೆ” ಎಂಬ ವಿಷಯವನ್ನು ಕುರಿತು ವಿಶ್ರಾಂತ ಶಿಕ್ಷಣಾಧಿಕಾರಿಗಳಾದ ಶರಣ ಭರಮಪ್ಪ ಮೈಸೂರ್ ಅವರು ಉಪನ್ಯಾಸ ನೀಡಿದರು, ಆಧುನಿಕ ಯುಗದಲ್ಲಿ ಯುವ ಸಮುದಾಯ ಎದುರಿಸುತ್ತಿರುವ ಮನೋಭಾವಗಳಿಗೆ ವಚನ ಸಾಹಿತ್ಯದ ಅರಿವು ಸಂಜೀವಿನಿಯಾಗಬಲ್ಲದು, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳು ಯುವಜನರನ್ನು ವೈದಿಕತೆಯ ವಿಷದ ಕುಣಿಕೆಗೆ ಆಹಾರವಾಗಿ ಪರಿಣಮಿಸಿದೆ ಎಂದು ಹೇಳಿದರು. ಕಾರ್ಯಕ್ರಮದ ಅಂಗವಾಗಿ ನಡೆಸಿದ್ದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಕುಮಾರಿ ಅಶ್ವಿನಿ, ಕುಮಾರಿ ಪ್ರಿಯಾಂಕ ಮತ್ತು ಕುಮಾರಿ ಸೃಷ್ಟಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಕೆ.ಬಿ.ಪರಮೇಶ್ವರಪ್ಪನವರು ಬಹುಮಾನ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ತಾಲೂಕ್ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣ ಎಸ್.ಬಿ.ರುದ್ರಗೌಡ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಜಾತಿ ಕಲಹಗಳಿಗೆ ವಚನ ಸಾಹಿತ್ಯದಲ್ಲಿ ಮದ್ದಿದೆ ಎಂದರು. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ವಚನಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ದೇಶದ ಸತ್ಪçಜೆಗಳಾಗಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ದತ್ತಿ ದಾನಿಗಳಾದ ಕಲ್ಲಿಹಾಳ್ ಶಿವಲಿಂಗಮ್ಮ ಮತ್ತು ಶಾನಭೋಗ್ ಹಾಲಯ್ಯ ಹಾಗೂ ದತ್ತಿ ನೀಡಿದ ಶರಣ ನಿರಂಜನ್ ಇವರುಗಳನ್ನು ಸ್ಮರಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷರಾದ ಶರಣೆ ಗಾಯಿತ್ರಿ ವಸ್ತçದ್ ಹಾಗೂ ನಗರ ಘಟಕದ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿರಿಗೆರೆ ಎಂ.ಪರಮೇಶ್ವರಪ್ಪನವರು ಉಪಸ್ಥಿತರಿದ್ದರು. ಆರಂಭದಲ್ಲಿ ಶಿಕ್ಷಕಿ ಶರಣೆ ಪಾಟೀಲ್ ವನಜಾಕ್ಷಿ ವಚನ ಪ್ರಾರ್ಥನೆ ಮಾಡಿದರು, ಉಪನ್ಯಾಸಕರಾದ ಶರಣೆ ಜ್ಞಾನೇಶ್ವರಿ ಅವರು ಸರ್ವರನ್ನು ಸ್ವಾಗತಿಸಿದರು. ಶಿಕ್ಷಕರಾದ ಶರಣ ಎಂ ನಾಗರಾಜ್ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಶ.ಸಾ.ಪ. ಪದಾಧಿಕಾರಿಗಳಾದ ಶರಣರಾದ ಆರ್.ಸಿದ್ದೇಶಪ್ಪ, ಬಿ.ಟಿ. ಪ್ರಕಾಶ್, ಬಿ.ಎಂ.ವಿಶ್ವೇಶ್ವರಯ್ಯ, ಕಲಿವೀರ ಕಳ್ಳಿಮನಿ, ಕೆ.ಸಿ.ನಾಗರಾಜ್, ಪ್ರಕಾಶ್ ಕಡ್ಲೆಬಾಳು ಮುಂತಾದವರು ಭಾಗವಹಿಸಿದ್ದರು.