ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ಬದುಕಿಗೆ ಜ್ಞಾನದೀಪ

??

ಆಳಂದ:ಜ.22: ಮೂಢನಂಬಿಕೆ, ಕಂದಾಚಾರ ವಿರುದ್ಧ ನ್ಯಾಯ ನಿಷ್ಠುರತೆ ಧ್ವನಿಯಾಗಿದ್ದ 12ನೇ ಶತಮಾನದ ಬಸವಾದಿ ಶರಣರ ಸಮಕಾಲಿನ ನಿಜಶರಣ ಅಂಬಿರಚೌಡಯ್ಯನವರ ವಚನಗಳು ಸಮಾಜದ ಪ್ರತಿಯೊಬ್ಬರ ಬದುಕಿಗೆ ಕತ್ತಲೆ ಕಳೆಯುವ ಜ್ಞಾನ ದೀಪವಾಗಿವೆ ಎಂದು ನೆಲ್ಲೂರ ಸರ್ಕಾರಿ ಪ್ರೌಢಶಾಲೆಯ ಕನ್ನಡ ಪಂಡಿತ ಡಿ. ಎನ್. ಪಾಟೀಲ ಅವರು ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧನದಲ್ಲಿ ಶನಿವಾರ ತಾಲೂಕು ಆಡಳಿತ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.

ಶರಣ ಚೌಡಯ್ಯನವರು ಕೇವಲ ನಾವೀಕನಾಗಿರದೇ ಅವರೊಬ್ಬ ಮಾನವನ ಮೋಕ್ಷಸಾಗರ ದಾಟಿಸುವ ಅಂಬಿಗನಾಗಿದ್ದು, 770 ಶರಣಗಣದಲ್ಲೇ ಇವರು ನೇರ ನಿಷ್ಠುರತೆ ನಿರ್ಭಯದಿಂದ ಸಿಕ್ಕ 280 ವಚನಗಳು ಸಮಾಜದ ಅಂಕುಡೊಂಕನ್ನು ತಿದ್ದಿ ಸರಿದಾರಿಗೆ ತರುವ ಶಕ್ತಿ ಅಡಗಿದೆ. ಇಂದಿನ ಯುವ ಸಮುದಾಯ ಸೇರಿ ಎಲ್ಲರು ಅವರ ತತ್ವಗಳನ್ನು ಪಾಲಿಸುವುದು ಅಗತ್ಯವಾಗಿದೆ. ಶರಣರ ವಚನಗಳ ಸಮಾಜದ ಕೈಗನ್ನಡಿಯಾಗಿವೆ. ಇಂದಿನ ಮಕ್ಕಳಿಗೆ ಶರಣರ ತತ್ವಗಳ ಪಾಲನೆ ಸಂಸ್ಕಾರ ಶಿಕ್ಷಣ ನೀಡುವ ಮೂಲಕ ಅವರು ಕಂಡ ಕನಸು ನನಸಾಗಿಸಲು ಮುಂದಾಗಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು ಮಾತನಾಡಿದರು.

ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್. ಖಜೂರಿ ಚೌಡಯ್ಯನವರ ಭಾವಚಿತ್ರಕ್ಕೆ ಆರಂಭದಲ್ಲಿ ಪೂಜೆ ನೆರವೇರಿಸಿದರು. ಕೋಲಿ ಸಮಾಜ ಅಧ್ಯಕ್ಷ ಶರಣಪ್ಪ ನಾಟೀಕಾರ್, ಗ್ರೇಡ್-2 ತಹಸೀಲ್ದಾರ ಬಸವರಾಜ ರಕ್ಕಸಗಿ, ತೋಟಗಾರಿಕೆ ಹಿರಿಯ ನಿರ್ದೇಶಕ ಶಂಕರಗೌಡ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚನಾಳ, ಕೋಲಿ ಸಮಾಜ ಮುಖಂಡ ಶ್ರವಣಕುಮಾರ ಜಮಾದಾರ, ತಾಪಂ ಮಾಜಿ ಸದಸ್ಯ ಅಶೋಕ ಜಮಾದಾರ, ಅಂಬರಾಯ ಚಿತಲಿ, ಸೀತರಾಮ್ ಜಮಾದಾರ, ನಾಮದೇವ ಶಖಾಪೂರ ಸೇರಿದಂತೆ ಸಮಾಜದ ಕಾರ್ಯಕರ್ತರು ಹಾಗೂ ಇಲಾಖೆಗಳ ನೌಕರರು ಉಪಸ್ಥಿತರಿದ್ದರು. ಶಿಕ್ಷಕ ಕಲ್ಯಾಣಪ್ಪ ಬಿಜ್ಜರಗಿ ನಿರೂಪಿಸಿ ವಂದಿಸಿದರು.

ಬಳಿಕ ಪಟ್ಟಣದ ಹಳೆಯ ತಹಸೀಲ್ದಾರ ಕಚೇರಿಯಿಂದ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ನಡೆಯಿತು.