ನಿಜವಾದ ಗುರು ಶಿಷ್ಯನ ಶ್ರೇಯೋಭಿವೃದ್ಧಿ ಬಯಸುತ್ತಾನೆ: ಸಿದ್ಧಲಿಂಗ ಶಿವಾಚಾರ್ಯರು

ಕಲಬುರಗಿ,ಏ.6-ನಿಜವಾದ ಗುರು ತನ್ನ ಶಿಷ್ಯನ ಶ್ರೇಯೋಭಿವೃದ್ಧಿಯನ್ನು ಬಯಸುತ್ತಾನೆ ಎಂದು ಮುಗಳನಾಗಾವಿಯ ಕಟ್ಟಿಮನಿ ಸಂಸ್ಥಾನ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ನುಡಿದರು.
ಶಹಾಬಾದ ತಾಲ್ಲೂಕಿನ ಸುಕ್ಷೇತ್ರ ದೇವನ ತೆಗನೂರ ಗ್ರಾಮದಲ್ಲಿ ಮಹಾತ್ಮ ಶಿವಯೋಗೀಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.29 ರಿಂದು ಏ.8 ರವರೆಗೆ ನಡೆಯುತ್ತಿರುವ ಮಹಾಶಿವಶರಣ ಬಿಲ್ಲಮರಾಜನ ಪುರಾಣ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತಿದ್ದ ಅವರು, ಇಂದಿನ ಕಲಿಯುಗದ ಕಲುಷಿತ ವಾತಾವರಣದಲ್ಲಿ ಮನಸ್ಸು ಆನಂದದಿಂದ ಇರಬೇಕಾದರೆ ಪುರಾಣ, ಪ್ರವಚನವನ್ನು ಆಲಿಸಬೇಕು ಎಂದರು.
ಸುಂಟನೂರ ಸಂಸ್ಥಾನ ಹಿರೇಮಠದ ಖ್ಯಾತ ಪುರಾಣ ಪ್ರವಚನಕಾರರಾದ ಜ್ಯೋತಿಷ್ಯರತ್ನ ಸಿದ್ಧೇಶ್ವರ ಶಾಸ್ತ್ರಿಗಳು ಪುರಾಣ ಪ್ರವಚನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ವಿನೋದಕುಮಾರ ದಸ್ತಾಪೂರ, ಷಣ್ಮುಖಯ್ಯ ಮುತ್ತಗಾ ಅವರು ಸಂಗೀತ ಮತ್ತು ಸಿದ್ಧಲಿಂಗ ಶೆಟ್ಟಿ ಶಿರವಾಳ ಅವರು ಕಾರ್ಯಕ್ರಮದ ಸಂಚಾಲನೆಯನ್ನು ನಡೆಸಿಕೊಟ್ಟರು. ಕಮೀಟಿ ಅಧ್ಯಕ್ಷರಾದ ಶಂಕರಬಾಬು ಕಣಕಿ, ಉಪಾಧ್ಯಕ್ಷರಾದ ಶಿವಶರಣಪ್ಪ ಧರ್ಮಾನಂದ ಸೇರಿದಂತೆ ಮತ್ತಿತರರು ವೇದಿಕೆ ಮೇಲಿದ್ದರು.