ನಿಜಗುಣಾನಂದ ಶ್ರೀಗೆ ಕೊಲೆ ಬೆದರಿಕೆ ಪತ್ರ: ಬಸವರಾಜ ಧನ್ನೂರ ಖಂಡನೆ

ಬೀದರ್: ಸೆ.15:ಬಸವ ತತ್ವ ಪ್ರಚಾರಕ, ಪ್ರಖರ ವಾಗ್ಮಿ ನಿಜಗುಣಾನಂದ ಸ್ವಾಮೀಜಿ ಅವರಿಗೆ ಕಿಡಿಗೇಡಿಗಳು ಅನಾಮಧೇಯ ಕೊಲೆ ಬೆದರಿಕೆ ಪತ್ರ ಬರೆದಿರುವುದನ್ನು ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ಸ್ವಾಮೀಜಿ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ.
ಜನರಲ್ಲಿ ವೈಚಾರಿಕತೆ ಬಿತ್ತಿ, ಬೆಳೆಸುತ್ತಿರುವ ಸ್ವಾಮೀಜಿ ಅವರಿಗೆ 2020 ರಿಂದ ನಿರಂತರ ಕೊಲೆ ಬೆದರಿಕೆ ಪತ್ರಗಳು ಬರುತ್ತಿರುವುದು ಆತಂಕಕಾರಿ. ಈ ಬಾರಿಯ ಪತ್ರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದ್ದಾರೆ.
ನಿಜಗುಣಾನಂದ ಸ್ವಾಮೀಜಿ ಮೂರು ದಶಕಗಳಿಂದ ನಾಡಿನಾದ್ಯಂತ ಸಂಚರಿಸುತ್ತ, ಪ್ರವಚನ ಹಾಗೂ ತಮ್ಮ ಉದ್ಭೋಧಕ ಭಾಷಣಗಳ ಮೂಲಕ ನೈಜ ಬಸವ ತತ್ವವನ್ನು ಬಿತ್ತುತ್ತಿದ್ದಾರೆ. ಬಸವಾದಿ ಶರಣರ ವಚನಗಳಲ್ಲಿರುವ ಅಂಶಗಳನ್ನು ನಿರ್ಭಿಡೆಯಿಂದ ಜನರ ಮುಂದಿಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಯಾವುದೇ ಆಸ್ತಿ, ಅಂತಸ್ತುಗಳ ಬೆನ್ನು ಹತ್ತದೆ, ಬಸವ ತತ್ವಕ್ಕಾಗಿಯೇ ತಮ್ಮ ಬದುಕು ಮೀಸಲಿಟ್ಟು, ಮೌಢ್ಯ ಹಾಗೂ ಶೋಷಣೆ ವಿರುದ್ಧ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಜನರನ್ನು ವೈಚಾರಿಕತೆಯೆಡೆಗೆ ಕರೆದೊಯ್ಯುವ ಅವರ ಪ್ರವಚನಗಳು ಪ್ರಸಿದ್ಧಿ ಪಡೆದಿದೆ. ಅವರ ಪ್ರವಚನ ಸ್ಥಳಗಳಲ್ಲಿ ಸೇರುವ ಜನಸ್ತೋಮವೇ ಅವರ ಬಗೆಗಿನ ಗೌರವ ಹಾಗೂ ಜನಪ್ರಿಯತೆಗೆ ನಿದರ್ಶನವಾಗಿದೆ ಎಂದು ತಿಳಿಸಿದ್ದಾರೆ.
ಜಾತಿ, ಮತ, ಪಂಥಗಳ ಭೇದವಿಲ್ಲದೆ ಪ್ರಜ್ಞಾವಂತ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವ ಶ್ರೀಗಳಿಗೆ ಕೊಲೆ ಬೆದರಿಕೆ ಪತ್ರಗಳು ಬರುತ್ತಿರುವುದು ದುರದೃಷ್ಟಕರ. ಶ್ರೀಗಳು ಈ ರೀತಿಯ ಗೊಡ್ಡು ಬೆದರಿಕೆಗಳಿಂದ ವಿಚಲಿತರಾಗಬೇಕಿಲ್ಲ. ನಾಡಿನ ಬಸವಾನುಯಾಯಿಗಳು ಅವರ ಬೆನ್ನಿಗಿದ್ದಾರೆ ಎಂದು ತಿಳಿಸಿದ್ದಾರೆ.
ದುಷ್ಟ ಶಕ್ತಿಗಳು ಬಸವಣ್ಣನ ಕಾಲದಿಂದಲೂ ಬಸವ ತತ್ವದ ಮೇಲೆ ನಿರಂತರ ಪ್ರಹಾರ ಮಾಡುತ್ತಲೇ ಬಂದಿವೆ. ತತ್ವದಲ್ಲಿ ಇರುವ ಅಗಾಧ ಚಿಂತನೆ ಹಾಗೂ ಶಕ್ತಿಯಿಂದಾಗಿ ಬಸವ ತತ್ವ ಜಾಗತಿಕವಾಗಿ ದಿನೇ ದಿನೇ ಇನ್ನಷ್ಟು ಪ್ರಖರವಾಗಿ ಬೆಳಗುತ್ತಿದೆ. ಅನೇಕ ರಾಷ್ಟ್ರಗಳ ಜನ ಬಸವ ತತ್ವವನ್ನು ಒಪ್ಪಿಕೊಂಡು, ಅಪ್ಪಿಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.