ನಿಗೂಢ ಸ್ಫೋಟ; ಮೂವರ ದೇಹ ಛಿದ್ರ

ಬೆಂಗಳೂರು, ಸೆ. ೨೩- ನಗರದ ದೇವರ ಚಿಕ್ಕನಹಳ್ಳಿಯ ಆರ್ಷಿತ್ ಶೆಲ್ಟರ್‍ಸ್ ಅಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ತಾಯಿ-ಮಗಳು ಮೃತಪಟ್ಟ ದುರಂತದ ಬೆನ್ನಲ್ಲೇ ಚಾಮರಾಜಪೇಟೆಯ ಗೋದಾಮಿನಲ್ಲಿ ಇಂದು ನಿಗೂಢ ಸ್ಫೋಟ ಸಂಭವಿಸಿ, ಸ್ಫೋಟದ ರಭಸಕ್ಕೆ ಮೂರು ಮಂದಿಯ ದೇಹ ಛಿದ್ರಗೊಂಡು ಬೆಂಕಿ ಹೊತ್ತಿ ಉರಿದು ಐವರು ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಇಂದು ಮಧ್ಯಾಹ್ನ ಇದ್ದಕ್ಕಿದ್ದಂತೆ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದ ಶಬ್ಧ ಕೇಳಿ ಸುತ್ತ-ಮುತ್ತಲಿನ ಜನ ಬೆಚ್ಚಿ ಬಿದ್ದಿದ್ದಾರೆ. ಎಲ್ಲಿ ಏನಾಯಿತು ಎಂದು ತಿಳಿದು ಸ್ಥಳಕ್ಕೆ ಧಾವಿಸುವ ವೇಳೆಗಾಗಲೇ ಮೂವರ ದೇಹಗಳು ಛಿದ್ರ ಛಿದ್ರವಾಗಿ ಬಿದ್ದಿದ್ದನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಐವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಿಲ ಸಿಲಿಂಡರ್ ಸ್ಫೋಟಿಸಿದೆಯೋ ಅಥವಾ ಬೇರೆ ಯಾವುದೋ ಸ್ಫೋಟಕ ವಸ್ತು ಸ್ಫೋಟಗೊಂಡಿದೆಯೇ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.
ಗೋದಾಮಿನ ಸಮೀಪದಲ್ಲಿದ್ದ ಪಂಕ್ಚರ್ ಶಾಪ್ ಮಾಲೀಕ ಅಸ್ಲಂ ಹಾಗೂ ಟೀ ಅಂಗಡಿಗೆ ಟೀ ಕುಡಿಯಲು ಬಂದಿದ್ದ ವ್ಯಕ್ತಿ ಸೇರಿ ಮೂರು ಮಂದಿ ಈ ದುರಂತದಲ್ಲಿ ಮೃತಪಟ್ಟಿದ್ದಾರೆ.
ಸ್ಫೋಟಗೊಂಡ ಶಬ್ಧ ೧೦೦ ಮೀಟರ್ ದೂರದವರೆಗೂ ಮಾರ್ಧನಿಸಿ ಜನ ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪನದ ಅನುಭವವಾಯಿತೆಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಫೋಟದ ರಭಸಕ್ಕೆ ಗೋದಾಮಿನ ಅಕ್ಕ-ಪಕ್ಕದ ಮನೆಗಳ ಕಿಟಕಿ ಬಾಗಿಲುಗಳು ೩ ಮೀಟರ್ ದೂರಕ್ಕೆ ಹಾರಿ ಛಿದ್ರವಾಗಿ ಬಿದ್ದಿರುವ ದೃಶ್ಯ ಭಯಾನಕವಾಗಿತ್ತು.

ಘಟನೆಯಲ್ಲಿ ೧೦ಕ್ಕೂ ಹೆಚ್ಚು ಬೈಕ್‌ಗಳು ಸುಟ್ಟು ಕರಕಲಾಗಿವೆ. ಅಕ್ಕಪಕ್ಕದ ಮನೆಗಳಲ್ಲಿದ್ದವರಿಗೂ ಸಣ್ಣಪುಟ್ಟ ಗಾಯವಾಗಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಗಳ ಕಿಟಕಿ ಗಾಜು ಪುಡಿಪುಡಿಯಾಗಿವೆ. ಸ್ಫೋಟದಿಂದ ಚಿಲ್ಲರೆ ಅಂಗಡಿ ಸಂಪೂರ್ಣ ಜಖಂ ಆಗಿದೆ. ಟೀ ಕುಡಿಯಲು ಬಂದಿದ್ದ ವ್ಯಕ್ತಿಯ ದೇಹವೂ ಛಿದ್ರ ಛಿದ್ರವಾಗಿದೆ.
ರಾಯನ್ ವೃತ್ತದಲ್ಲಿ ಮಧ್ಯಾಹ್ನ ೧೨.೧೦ರ ಸುಮಾರಿಗೆ ದಿಢೀರ್ ಸ್ಫೋಟ ಸಂಭವಿಸಿ ಭಾರೀ ಶಬ್ದ ಕೇಳಿಬಂತು ನಾನು ಸ್ಥಳಕ್ಕೆ ಹೋದಾಗ ದಟ್ಟವಾದ ಹೊಗೆ ಆವರಿಸಿತ್ತು. ಪಂಕ್ಚರ್ ಅಂಗಡಿಯಲ್ಲಿದ್ದ ಕಂಪ್ರೆಸರ್ ಸ್ಫೋಟದ ಶಂಕೆ ವ್ಯಕ್ತವಾಗಿದೆ ಎಂದು ಸ್ಥಳೀಯರೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಗೋಡೌನ್ ತುಂಬಾ ಹೆಚ್ಚು ಪಟಾಕಿ ಇರುವ ಹಿನ್ನೆಲೆಯಲ್ಲಿ ಮತ್ತೆ ಸ್ಪೋಟವಾಗುವ ಸಾಧ್ಯತೆ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಫೈರ್ ಇಂಜಿನ್ ಮೂಲಕ ನೀರು ಹಾಕಿ ಬೆಂಕಿ ಹತೋಟಿಗೆ ತರಲಾಗಿದೆ. ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟ ಇರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಆದರೂ ದುರ್ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಗೋದಾಮಿನಲ್ಲಿ ಒಟ್ಟು ೮ ಮಂದಿ ಕೆಲಸ ಮಾಡುತ್ತಿದ್ದು, ಸ್ಪೋಟದ ತೀವ್ರತೆಗೆ ಮೂವರ ದೇಹಗಳು ಛಿದ್ರ ಛಿದ್ರವಾಗಿವೆ. ಈ ಮೂವರು ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕವರಾಗಿದ್ದು, ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಘಟನೆಯ ಸಂಬಂಧ ೩ ಆಯಾಮದಲ್ಲಿ ತನಿಖೆ ನಡೆಲಾಗುತ್ತಿದೆ ಎಂದು ಪಾಂಡೆ ತಿಳಿಸಿದರು.

ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡವರಲ್ಲಿ ಇಬ್ಬರು ಸ್ಥಿತಿ ಚಿಂತಾಜನಕವಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಅವರು ತಿಳಿಸಿದ್ದಾರೆ.