ನಿಗಮ ರಚನೆ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ

dav

ಬಾದಾಮಿ, ನ 20- ಮರಾಠ ನಿಗಮ, ವೀರಶೈವ ಲಿಂಗಾಯತ ನಿಗಮ ಇವು ಯಾರಿಗಾಗಿ. ಜಾತಿಗೊಂದು ನಿಗಮ, ಪ್ರಾಧಿಕಾರ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದೀರಿ. ಇದರಿಂದ ಸಮಾಜದ ಅಭಿವೃದ್ಧಿ ಎಂಬ ಭ್ರಮೆಯಲ್ಲಿರುವ ರಾಜಕಾರಿಣಿಗಳು ಇಡೀ ರಾಜ್ಯದ ಬಾಂಧವ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಇಷ್ಟಲಿಂಗ ಶಿರಶಿ ಆರೋಪಿಸಿದರು.
ಕಾನಿಪ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾನು ಯಾವುದೇ ಪಕ್ಷದ ಕಾರ್ಯಕರ್ತನಲ್ಲ ಎಂದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ನೀವು 30-40 ವರ್ಷಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೀರಿ. ಸರ್ವ ಜನಾಂಗದ ಶಾಂತಿಯ ತೋಟವಾದ ಈ ರಾಜ್ಯವನ್ನು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿದ್ದೀರಿ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಪಡಿಯಚ್ಚು ಎಂದು ಬಿಂಬಿತವಾಗಿರುವ ಕರ್ನಾಟಕದ ಮಠ ಮಾನ್ಯಗಳು ಹಾಗೂ ಮಠಾಧೀಶರು ನಿಮ್ಮನ್ನು ಆಡಳಿತಾತ್ಮಕ ಸಮಾಜದಿಂದ ದೂರ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದರು. ಜಾತಿ ಜಾತಿಗಳ ಹೆಸರಿನಲ್ಲಿ ಜಯಂತಿ ಕಾರ್ಯಕ್ರಮಗಳನ್ನು ಆರಂಭಿಸಿ ಸಹೋದರರಂತಿದ್ದ ಎಲ್ಲ ಬಾಂಧವರು ಇಂದು ದೂರಾಗುತ್ತಿದ್ದಾರೆ. ನಿಮ್ಮ ಅಕ್ಕಪಕ್ಕದ ಸಚಿವರು ನುಡಿದಂತೆ ನಡೆದಿದ್ದಾರೆ ಅಂತಾ ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಅದು ಯಾವುದಕ್ಕಾಗಿ ಎಂದು ನೀವು ಪರಾಮರ್ಶಿಸಿಕೊಳ್ಳಲಿಲ್ಲ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಹೇಳಿದಂತೆ ತೋಳಬಲ ಮತ್ತು ಹಣಬಲ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವದ ನಾಶ ಎಂದು ಹೇಳಿದ್ದರು ಎಂದರು.