ನಿಗಮ ಮಂಡಳಿ ನೇಮಕ ಮತ್ತಷ್ಟು ತಡ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜ.೨೬;ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷರ ಪಟ್ಟಿಯನ್ನು ಅಂತಿಮಗೊಳಿಸಲು ಇಂದು ರಾಜ್ಯಕ್ಕೆ ಬರಬೇಕಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಭೇಟಿ ಮುಂದಕ್ಕೆ ಹೋಗಿದ್ದು, ನಿಗಮ ಮಂಡಳಿ ಪಟ್ಟಿ ಬಿಡುಗಡೆ ಮತ್ತಷ್ಟು ತಡವಾಗಲಿದೆ.
ನಿಗಮ ಮಂಡಳಿಗಳಿಗೆ ೩೭ ಶಾಸಕರ ಪಟ್ಟಿ ಅಂತಿಮಗೊಂಡಿದೆ. ಆದರೆ ಕಾರ್ಯಕರ್ತರ ಪಟ್ಟಿಗೆ ಇನ್ನೂ ಹೈಕಮಾಂಡ್‌ನ ಒಪ್ಪಿಗೆ ಸಿಕ್ಕಿಲ್ಲ. ನಿಗಮ ಮಂಡಳಿಗಳಿಗೆ ನೇಮಕ ಮಾಡಬೇಕಾದ ಕಾರ್ಯಕರ್ತರ ಹೆಸರಿನ ಪಟ್ಟಿಯನ್ನು ರಾಜ್ಯಕಾಂಗ್ರೆಸ್ ವರಿಷ್ಠರಿಗೆ ಕಳುಹಿಸಿದೆ.
ಈ ಪಟ್ಟಿಗೆ ವರಿಷ್ಠರು ಇನ್ನು ಸಹಿ ಹಾಕಿಲ್ಲ. ಹಾಗಾಗಿ, ನಿಗಮ ಮಂಡಳಿ ಪಟ್ಟಿ ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರುಗಳು ಸಚಿವರುಗಳ ಜತೆ ಮಾತನಾಡಿ ಸುಮಾರು ೩೯ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷರ ಹುದ್ದೆ ನೀಡುವ ಸಂಬಂಧ ಕಾರ್ಯಕರ್ತರುಗಳ ಹೆಸರುಗಳನ್ನು ಹೈಕಮಾಂಡ್‌ಗೆ ಕಳುಹಿಸಿಕೊಟ್ಟಿದ್ದಾರೆ.
ಈ ಪಟ್ಟಿಯಲ್ಲಿ ಹೆಸರುಗಳು ಮಾತ್ರ ಇದ್ದು, ಯಾರಿಗೆ ಯಾವುದೆ ನಿಗಮ ಮಂಡಳಿ ಎಂಬುದನ್ನು ಪಟ್ಟಿಗೆ ಹೈಕಮಾಂಡ್ ಅನುಮೋದನೆ ನೀಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಾಗೂ ರಾಜ್ಯಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಂಗ್ ಸುರ್ಜೇವಾಲಾ ಒಟ್ಟಿಗೆ ಕುಳಿತು ಚರ್ಚಿಸಿ ತೀರ್ಮಾನ ಮಾಡುತ್ತಾರೆ.ಕಾಂಗ್ರೆಸ್‌ನ ವರಿಷ್ಠರು ರಾಹುಲ್ ಅವರ ಭಾರತ್ ಜೋಡೊ ಯಾತ್ರೆಯಲ್ಲಿ ಬ್ಯುಸಿಯಾಗಿರುವುದರಿಂದ ಕಾರ್ಯಕರ್ತರ ಪಟ್ಟಿಗೆ ಅಂಕಿತ ಬೀಳುವುದು ತಡವಾಗಿದೆ. ಇಂದು ಇಲ್ಲ ನಾಳೆ ಕಾರ್ಯಕರ್ತರ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಲಿದ್ದು, ಇದಾದ ಬಳಿಕ ಸುರ್ಜೇವಾಲಾ ಅವರು ರಾಜ್ಯಕ್ಕೆ ಆಗಮಿಸಿ ಎಲ್ಲರ ಜತೆ ಚರ್ಚಿಸಿ ಯಾವ ಕಾಯಕರ್ತರಿಗೆ ಯಾವ ನಿಗಮ ಮಂಡಳಿ ಎಂಬುದನ್ನು ತೀರ್ಮಾನಿಸಿ ಪಟ್ಟಿಯನ್ನು ಪ್ರಕಟಿಸುವರು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ವರಿಷ್ಠರು ಪಟ್ಟಿಗೆ ಸಹಿ ಹಾಕುತ್ತಾರೆ ಎಂಬ ನಿರೀಕ್ಷೆ ಇತ್ತು. ಹಾಗಾಗಿಯೆ ಸುರ್ಜೇವಾಲಾ ಇಂದು ನಗರಕ್ಕೆ ಬರಲಿದ್ದಾರೆ ಎಂದು ಹೇಳಲಾಗಿತ್ತು
ಪಟ್ಟಿಗೆ ವರಿಷ್ಠರು ಸಹಿ ಕಾಕದ ಕಾರಣ ಸುರ್ಜೇವಾಲಾ ಭೇಟಿ, ನಿಗಮ ಮಂಡಳಿ ಪಟ್ಟಿ ಬಿಡುಗಡೆ ಎರಡೂ ಮುಂದಕ್ಕೆ ಹೋಗಿದೆ.