ನಿಗಮ-ಮಂಡಳಿ ತಾರತಮ್ಯ ಸರಿಪಡಿಸಲು ಸುದರ್ಶನ್ ಆಗ್ರಹ

ಕೋಲಾರ,ಫೆ,೨೦- ಸಮಾಜದಲ್ಲಿನ ಎಲ್ಲಾ ಹಿಂದುಳಿದ ಸಮುದಾಯಗಳಿಗೂ ಒಂದೊಂದು ನಿಗಮ ಮಾಡಿ ಸರ್ಕಾರದಿಂದ ಆಗಿರುವ ತಾರತಮ್ಯ ಸರಿಪಡಿಸಿ, ಅದು ಸಾಧ್ಯವಾಗದಿದ್ದಲ್ಲಿ ದೇವರಾಜ ಅರಸು ಅಭಿವೃದ್ದಿ ನಿಗಮಕ್ಕೆ ಐದಾರು ಸಾವಿರ ಕೋಟಿ ಅನುದಾನ ನೀಡಿ ಅದರಡಿ ಎಲ್ಲಾ ಹಿಂದುಳಿದ ವರ್ಗಗಳ ವೃತ್ತಿಗಳಿಗೂ ಅವಕಾಶ ಕಲ್ಪಿಸಿ ಎಂದು ಸರ್ಕಾರವನ್ನು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಒತ್ತಾಯಿಸಿದರು.
ನಗರದ ಜ್ಯೋತಿ ಎಜುಕೇಷನಲ್ ಟ್ರಸ್ಟ್‌ನ ಜನೋಪಕಾರಿ ದೊಡ್ಡಣ್ಣಸ್ವಾಮಿ ರಂಗಮಂದಿರಲ್ಲಿ ನಡೆದ ಗಾಣಿಗ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರ ಈಗ ಅನೇಕ ಸಮುದಾಯಗಳಿಗೆ ನಿಗಮ ಮಾಡಿದೆ ಅದರ ಜತೆಯಲ್ಲೇ ಹಲವಾರು ಜಾತಿಗಳನ್ನು ಕೈಬಿಟ್ಟಿದ್ದು, ತಾರತಮ್ಯ ಎಸಗಿದೆ ಎಂದ ಅವರು, ಎಲ್ಲಾ ಹಿಂದುಳಿದ ಜಾತಿಗಳಿಗೂ ನಿಗಮ ಮಾಡಿ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸ ಮಾಡಲಿ ಎಂದು ಪ್ರತಿಪಾದಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವಕರ್ಮ ಯೋಜನೆಯಲ್ಲೂ ಹಿಂದುಳಿದ ಗಾಣಿಗ ವೃತ್ತಿಯ ಪ್ರಸ್ತಾಪವಿಲ್ಲ ಎಂದು ಟೀಕಿಸಿದ ಅವರು, ಗಾಣಿಗರದ್ದು ಕಾಯಕ ಸಮಾಜವಾಗಿದೆ ಎಂದು ಅರಿತು ಸರಿಪಡಿಸಬೇಕು ಎಂದು ತಿಳಿಸಿ,ಈ ಅನ್ಯಾಯದ ಕುರಿತು ಪ್ರಧಾನ ಮಂತ್ರಿಗಳಿಗೂ ಪತ್ರ ಬರೆದಿರುವುದಾಗಿ ನುಡಿದರು.
ಹಿಂದುಳಿದ ವರ್ಗಗಳು ಹೋರಾಟದ ಮನೋಭಾವ ಬೆಳೆಸಿಕೊಳ್ಳಿ, ಇಲ್ಲವಾದಲ್ಲಿ ನಮ್ಮ ಹಕ್ಕು ಪಡೆಯಲು ಸಾಧ್ಯವಿಲ್ಲ, ಸಂವಿಧಾನದ ಬಗ್ಗೆ ಅರಿವು ಹೆಚ್ಚಿಸಿಕೊಂಡು ಸಾಮಾಜಿಕ ನ್ಯಾಯ ಪಡೆಯಬೇಕು ಇಲ್ಲವಾದಲ್ಲಿ ಮೂಲೆಗುಂಪು ಖಚಿತ ಎಂದು ಎಚ್ಚರಿಸಿದರು.
ಬಜೆಟ್ ಕುರಿತು ಮಾತನಾಡಿ, ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ ಅವಳಿ ಜಿಲ್ಲೆಗಳ ಪಾಲಿಗೆ ನಿರಾಶಾದಾಯಕ ಎಂದ ಅವರು, ಚುನಾವಣೆಗೆ ಮುನ್ನಾ ಕೋಲಾರಕ್ಕೆ ನೀಡಿರುವ ಭರವಸೆ ಈಡೇರಿಸಲು ಮುಖ್ಯಮಂತ್ರಿಗಳು ಜೂನ್‌ನಲ್ಲಿನ ಮಂಡಿಸುವ ಸಪ್ಲಿಮೇಟರಿ ಬಜೆಟ್‌ನಲ್ಲಿ ಸರಿದೂಗಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಜ್ಯೋತಿ ಎಜುಕೇಷನ್ ಟ್ರಸ್ಟ್‌ನಿಂದ ೬೦ ಮಂದಿ ಪಿಯುಸಿ ಹಾಗೂ ಇತರೆ ಪದವಿ ಕೋರ್ಸುಗಳ ಗಾಣಿಗ ಸಮುದಾಯದ ವಿದ್ಯಾರ್ಥಿಗಳು ಹಾಗೂ ಇತರೆಲ್ಲಾ ಸಮುದಾಯಗಳ ೨೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದ್ದು,ಸಮುದಾಯದ ಆಚೆಗೂ ನೆರವು ನೀಡುತ್ತಿರುವುದಾಗಿ ತಿಳಿಸಿದರು.
ವಿದ್ಯಾರ್ಥಿ ಸಮುದಾಯ ಡ್ರಗ್ಸ್‌ಗೆ ಬಲಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ವಿಷಾದಿಸಿದ ಅವರು, ಮೊಬೈಲ್ ಒಳ್ಳೆಯದಕ್ಕೆ ಮಾತ್ರ ಬಳಸಿ ಎಂದು ಕಿವಿಮಾತು ಹೇಳಿ, ಸ್ಪರ್ಧಾತ್ಮಕ ಯುಗ, ಗ್ರಂಥಾಲಯ ಬಳಸಿಕೊಳ್ಳಿ, ಪತ್ರಿಕೆಗಳನ್ನು ಓದಿ, ಮನಸ್ಸಿನ ನಿಗ್ರಹಕ್ಕಾಗಿ ಧ್ಯಾನ,ಪ್ರಾರ್ಥನೆ ಮಾಡುವ ಅಭ್ಯಾಸ ರೂಢಿಸಿಕೊಲ್ಳಿ ಎಂದರು.
ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಗಾಣಿಗ ಮಹಾಸಭಾ ಅಧ್ಯಕ್ಷ ರಾಜಶೇಖರ್,ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್, ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣ, ಉಪನ್ಯಾಸಕ ವಲ್ಲಂಬಳ್ಳಿ ಅಮರೇಂದ್ರ, ಹೈನುಗಾರಿಕೆ ರಾಜ್ಯ ಪ್ರಶಸ್ತಿಪಡೆದ ವೆಂಕಟಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.
೬೦ ಮಂದಿ ಗಾಣಿಗ ಸಮುದಾಯದ ಹಾಗೂ ಇತರೆಲ್ಲಾ ವರ್ಗಗಳ ೨೦ ಮಂದಿ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಗೋಪಾಲಕೃಷ್ಣ ವಹಿಸಿದ್ದು, ಉಪಾಧ್ಯಕ್ಷೆ ಭಾರತೀದೇವಿ, ಸಂಘಟನಾ ಕಾರ್ಯದರ್ಶಿ ರವಿ, ಖಜಾಂಚಿ ಅಪ್ಪಯ್ಯಶೆಟ್ಟಿ, ವ್ಯವಸ್ಥಾಪಕ ಸುನೀಲ್ ಸಂದೀಪ್, ಟ್ರಸ್ಟ್ ಆಡಳಿತ ಮಂಡಳಿಯ ರಾಧಾಕೃಷ್ಣ, ಎಂಜಿವಿ ಕೃಷ್ಣ, ಎ.ರಾಮನಾರಾಯಣ, ಎಸ್.ಕೆ.ವೆಂಕಟರಾಂ, ವೀರಭದ್ರಪ್ಪ ನಾಗನಾಳ, ಡಾ.ಶಂಕರ್, ಡಾ.ಎಂ.ಶ್ರೀನಿವಾಸ್, ವಿ.ಆರ್.ವೆಂಕಟಾಚಲಪತಿ,ನಾಗನಾಳ ಮಂಜುನಾಥ್, ಜೆ.ಎಸ್.ಮಂಜುನಾಥ್, ವಿಜಯಲಕ್ಷ್ಮಿ,ಎನ್.ಕೆಂಪಯ್ಯ,ಶಿವಕುಮಾರ್, ಅರುಣ್ ಕುಮಾರ್, ವಿ.ಎಸ್.ಅರ್ಜುನ್ ಮತ್ತಿತರರಿದ್ದರು.ರಾಜ್‌ಕುಮಾರ್ ನಿರೂಪಿಸಿ,ನ್ಯಾಷನಲ್ ಪಬ್ಲಿಕ್ ಶಾಲೆಯ ಹರ್ಷಿತಾ,ಪೂಜಿತಾ ಪ್ರಾರ್ಥಿಸಿದರು.