ನಿಗಮ ಮಂಡಳಿ ಅಧ್ಯಕ್ಷ ನೇಮಕ ಬೆನ್ನಲ್ಲೇ ಕೈನಲ್ಲಿ ಅತೃಪ್ತಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜ.೨೭:ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷರ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಅತೃಪ್ತಿ ಕಾಣಿಸಿಕೊಂಡಿದ್ದು, ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೆಲ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೆ ಇರುವುದಕ್ಕೆ ಆಕ್ರೋಶಗೊಂಡಿದ್ದಾರೆ, ಪಟ್ಟಿಯಲ್ಲಿ ಹೆಸರಿರುವ ಕೆಲ ಶಾಸಕರು ತಾವು ಕೇಳಿದ ನಿಗಮ ಮಂಡಳಿ ಸಿಗದೆ ಇರುವುದಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ. ಹಾಗೆಯೇ, ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿಯ ಪಟ್ಟಿ ಬಿಡುಗಡೆ ವಿಳಂಬವಾಗಿರುವುದು ಅತೃಪ್ತಿಗೆ ಕಾರಣವಾಗಿದೆ. ಈ ಎಲ್ಲ ಅತೃಪ್ತಿ ಅಸಮಾಧಾನವನ್ನು ದಮನ ಮಾಡುವ ಪ್ರಯತ್ನ ಕಾಂಗ್ರೆಸ್‌ನಲ್ಲಿ ನಡೆದಿದೆ.
ಗಜಪ್ರಸವ ಎನಿಸಿದ್ದ ನಿಗಮ ಮಂಡಳಿಗಳಿಗೆ ೩೪ ಶಾಸಕರನ್ನು ನೇಮಕ ಮಾಡಿದ ಪಟ್ಟಿ ನಿನ್ನೆ ಸಂಜೆ ಹೊರ ಬಿದ್ದಿತು, ಪಟ್ಟಿ ಪ್ರಕಟವಾದ ಬೆನ್ನಲ್ಲೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಅತೃಪ್ತಿ ಕಾಣಿಸಿಕೊಂಡು ಶಾಸಕರುಗಳಾದ ಸತೀಶ್‌ಸೈಲ್ ಮತ್ತು ಬಾಗೇಪಲ್ಲಿ ಸುಬ್ಬಾರೆಡ್ಡಿ, ಗುಬ್ಬಿಯ ಎಸ್.ಆರ್. ಶ್ರೀನಿವಾಸ್, ಗುಬ್ಬಿಯ ಎಸ್.ಆರ್ ವಿಶ್ವನಾಥ್ ಅವರು ತಮಗೆ ನೀಡಿರುವ ನಿಗಮ ಮಂಡಳಿ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿ ತಮಗೆ ಬೇರೆ ನಿಗಮ ಮಂಡಳಿ ನೀಡಬೇಕು ಎಂಬ ಒತ್ತಡವನ್ನು ಹೇರಿದ್ದರು.
ನಿಗಮ ಮಂಡಳಿ ಮೇಲೆ ಕಣ್ಣಿಟ್ಟಿದ ಹಿರಿಯ ಶಾಸಕರುಗಳು ತಮಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ದಕ್ಕದ ಬಗ್ಗೆ ಸಿಟ್ಟುಗೊಂಡು ತಮಗೆ ಯಾವ ಮಾನದಂಡದ ಮೇಲೆ ನಿಗಮ ಮಂಡಳಿ ನೀಡಿಲ್ಲ ಎಂಬುದನ್ನು ನಾಯಕರಲ್ಲಿ ಪ್ರಶ್ನೆಯನ್ನು ಮಾಡಿದ್ದರು.ನಿಗಮ ಮಂಡಳಿ ನೇಮಕಾತಿ ಪಟ್ಟಿಯಲ್ಲಿ ವಿಧಾನ ಪರಿಷತ್‌ನ ಸದಸ್ಯರಿಗೆ ಆದ್ಯತೆ ನೀಡದಿರುವುದು ಹಿರಿಯ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಇವರುಗಳು ಬಹಿರಂಗವಾಗಿ ಏನನ್ನು ಹೇಳದಿದ್ದರು ಸಿಟ್ಟುಗೊಂಡಿದ್ದು ಪಕ್ಷದ ವೇದಿಕೆಯಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಲು ಮುಂದಾಗಿದ್ದಾರೆ.ಶಾಸಕರ ಪಟ್ಟಿಯ ಜತೆಗೆ ಕಾರ್ಯಕರ್ತರನ್ನೂ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಪಟ್ಟಿ ಬಿಡುಗಡೆ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರು ಕೇವಲ ಶಾಸಕರ ಪಟ್ಟಿಯಷ್ಟೇ ಬಿಡುಗಡೆಯಾಗಿರುವುದಕ್ಕೆ ಅಸಮಾಧಾನಗೊಂಡಿದ್ದು, ಶಾಸಕರಿಗೂ ಆದಷ್ಟು ಬೇಗ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡಿ ಎಂಬ ಒತ್ತಡವನ್ನು ನಾಯಕರುಗಳ ಮೇಲೆ ಹೇರಿದ್ದಾರೆ.
ಅಸಮಾಧಾನ ಶಮನಕ್ಕೆ ಕಸರತ್ತು
ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಸಿಗದೆ ಮುನಿಸಿಕೊಂಡಿರುವ ಶಾಸಕರು ಹಾಗೂ ತಮಗೆ ಬಯಸಿದ ನಿಗಮ ಮಂಡಳಿ ಸಿಗದಿರುವುದಕ್ಕೆ ಅತೃಪ್ತಿ ಹೊರ ಹಾಕಿರುವ ಶಾಸಕರನ್ನು ಓಲೈಸುವ ಕಾರ್ಯವನ್ನು ಕಾಂಗ್ರೆಸ್ ನಾಯಕರು ನಡೆಸಿದ್ದು, ಇಂತಹ ಅಸಮಾಧಾನ ಅತೃಪ್ತಿ ಎಲ್ಲ ಸಹಜ. ಮುಂದೆ ಎಲ್ಲವೂ ಸರಿ ಹೋಗಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದು, ಅಸಮಾಧಾನಿತರ ಜತೆ ಮಾತನಾಡಿ ಎಲ್ಲವನ್ನೂ ಸರಿಪಡಿಸುವ ಪ್ರಯತ್ನ ನಡೆಸಿದ್ದಾರೆ.

ಅಸಮಾಧಾನ ಇಲ್ಲ: ಶ್ರೀನಿವಾಸ್
ನಿಗಮ ಮಂಡಳಿ ಅಧ್ಯಕ್ಷಗಿರಿಯ ಬಗ್ಗೆ ತಮಗೆ ಯಾವುದೇ ಅಸಮಾಧಾನ ಇಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಗುಬ್ಬಿಯ ಶಾಸಕ ಎಸ್.ಆರ್ ಶ್ರೀನಿವಾಸ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷಗಿರಿ ನೀಡಿದ್ದಾರೆ. ನನಗೆ ಯಾವುದೇ ಅಸಮಾಧಾನ ಇಲ್ಲ ಎಂದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷಗಿರಿ ನೀಡಿರುವುದಕ್ಕೆ ತಮಗೆ ಅಸಮಾಧಾನ ಇದೆ ಎಂಬ ವರದಿಗಳು ಸರಿಯಲ್ಲ. ನಾನು ಯಾವುದೇ ಸ್ಥಾನಮಾನದ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಇಂತಹುದೆ ನಿಗಮ ಮಂಡಳಿ ಕೊಡಿ ಎಂದು ಕೇಳಿರಲಿಲ್ಲ. ನನಗೆ ನೀಡಿರುವ ಹುದ್ದೆ ಬಗ್ಗೆ ಯಾವುದೇ ಬೇಸರವಾಗಲಿ ಅಸಮಾಧಾನವಾಗಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.