ದಾವಣಗೆರೆ.ಜೂ.೨೫: ಜಗಳೂರು ತಾಲೂಕಿನ ಕಾಂಗ್ರೆಸ್ ಮುಖಂಡ ತುಪ್ಪದಹಳ್ಳಿ ಹನುಮಂತಪ್ಪ ಅವರಿಗೆ ಸೂಕ್ತವಾದ ನಿಗಮ, ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ದಲಿತ ಮಹಾ ಒಕ್ಕೂಟ ಮತ್ತು ವಾಲ್ಮೀಕಿ ಜಂಟಿ ಸಂಘಟನೆಯ ಅಣಜಿ ಅಂಜಿನಪ್ಪ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಪ್ಪದಹಳ್ಳಿ ಹನುಮಂತಪ್ಪ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸ್ವಯಂ ನಿವೃತ್ತಿ ಪಡೆದು ರಾಜಕೀಯ ಪ್ರವೇಶ ಮಾಡಿದ್ದಾರೆ. ಹಲವಾರು ಬಾರಿ ಜಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಯಾಗಿದ್ದರು. ಒಂದು ಬಾರಿ ಪಕ್ಷೇತರ ರಾಗಿಯೂ ಸ್ಪರ್ಧಿಸಿದ್ದರು. ಅತಿ ಹಿರಿಯ ನಾಯಕರಾದ ಅವರಿಗೆ ವಾಲ್ಮೀಕಿ ಅಭಿವೃದ್ಧಿ ಮಂಡಳಿ ಒಳಗೊಂಡಂತೆ ಯಾವುದಾದರೂ ಮಂಡಳಿ ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕು. ಜುಲೈ ನಲ್ಲಿ ನಡೆಯುವ ಬಜೆಟ್ ಅಧಿವೇಶನ ಸಂದರ್ಭದಲ್ಲಿ ನಿಯೋಗದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.ಸೋಮವಾರ ನಾಯಕರ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ತುಪ್ಪದ ಹಳ್ಳಿ ಹನುಮಂತಪ್ಪ ಅವರ 73 ನೇ ಜನ್ಮ ದಿನ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ಮಹಾತ್ಮ ಗಾಂಧಿ, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಮಧ್ಯಾಹ್ನ 12.30ಕ್ಕೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಜಿಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್, ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಬಿ. ವೀರಣ್ಣ, ತಾಲೂಕು ಅಧ್ಯಕ್ಷ ಹದಡಿ ಹಾಲಪ್ಪ, ಅನೀಸ್ ಪಾಷಾ, ದಸಂಸ ಮುಖಂಡ ಎಚ್. ಮಲ್ಲೇಶ್, ಸೈಯದ್ ಸೈಪುಲ್ಲ ಇತರರು ಭಾಗವಹಿಸುವರು ಎಂದು ತಿಳಿಸಿದರು.ಸಂಘಟನೆಯ ಎಚ್.ಸಿ. ಮಲ್ಲಪ್ಪ, ಕೊಡಗ ನೂರು ಸುರೇಶ್, ಅಣ್ಣಪ್ಪ ಅಣ್ಣಿಗೆರೆ, ಓಬಣ್ಣ ಸುದ್ದಿಗೋಷ್ಠಿಯಲ್ಲಿದ್ದರು.