ನಿಗಮ ಅಧ್ಯಕ್ಷ ಬಾದರ್ಲಿಗೆ ಬಯಸದ ಭಾಗ್ಯಸ್ಟಮಕ್: ಮುಂದಿನ ನಡೆ ಕುತೂಹಲ

(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಜ.೨೭:ಬೇಡ ಬೇಡವೆಂದರೂ ಒಲಿದು ಬಂದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕುರಿತಂತೆ ಪ್ರತಿಕ್ರಿಯಿಸಿರುವ ಶಾಸಕ ಹಂಪನಗೌಡ ಬಾದರ್ಲಿ ವರಿಷ್ಠರ ಭೇಟಿಯ ನಂತರ ಈ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕಳೆದೆರೆಡು ದಿನಗಳ ಹಿಂದೆ ಸಚಿವ ಸ್ಥಾನ ದೊರೆಯದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕ ಬಾದರ್ಲಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನನಗೆ ಬೇಡ, ಕೊಟ್ಟರೂ ನಾನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದರು. ಆದರೆ, ಅವರು ಬೇಡ ಬೇಡವೆಂದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಅವರಿಗೆ ಒಲಿದು ಬಂದಿರುವ ಹಿನ್ನೆಲೆ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ವರಿಷ್ಠರ ಭೇಟಿ ನಂತರ ಈ ಕುರಿತು ಮಾತನಾಡುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ೫ ಬಾರಿ ಬಾದರ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡರಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಅವರು ಸಚಿವ ಸ್ಥಾನ ದೊರೆಯದ ಹಿನ್ನೆಲೆ ತೀವ್ರ ನಿರಾಸರಾಗಿದ್ದರು. ಈ ಹಿನ್ನೆಲೆಯಲ್ಲಿ ನಿಗಮಮಂಡಳಿ ಅಧ್ಯಕ್ಷ ಸ್ಥಾನ ನನಗೆ ಬೇಡ, ಕೊಟ್ಟರೂ ನಾನು ಸ್ವೀಕರಿಸುವುದಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.
ಇದೀಗ ಕಾಂಗ್ರೆಸ್ ಆಡಳಿತ ಬಾದರ್ಲಿ ಅವರಿಗೆ ನಿಗಮಮಂಡಳಿ ಅಧ್ಯಕ್ಷ ಸ್ಥಾನ ನೀಡಿದೆ. ನಿಗಮಮಂಡಳಿ ಅಧ್ಯಕ್ಷ ಸ್ಥಾನ ಸ್ವೀಕರಿಸುವುದೋ ಬೇಡವೋ ಎಂಬ ಗೊಂದಲದಲ್ಲಿ ಶಾಸಕ ಬಾದರ್ಲಿ ವರಿಷ್ಠರ ಭೇಟಿ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ವರಿಷ್ಠರು ನಿಗಮಮಂಡಳಿ ಅಧ್ಯಕ್ಷ ಸ್ಥಾನ ಸ್ವೀಕರಿಸುವಂತೆ ಬಾದರ್ಲಿ ಅವರ ಮನವೊಲಿಸಲಿದ್ದಾರೆಯೇ ಎನ್ನುವುದು ಸಿಂಧನೂರು ಕ್ಷೇತ್ರದ ಜನತೆಯಲ್ಲಿ ಕುತೂಹಲ ಮೂಡಿಸಿದೆ.