ನಿಗಮದ ಹಣ ರಕ್ಷಣೆ ಮಾಡದ ಸರ್ಕಾರ ವಿಸರ್ಜನೆಯಾಗಬೇಕು – ಪ್ರಣವಾನಂದ ಶ್ರೀಗಳ ಹೇಳಿಕೆ.

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಜೂ.2: ಈಡಿಗ ಸಮಾಜದ  ಪ್ರಣವಾನಂದ ಸ್ವಾಮೀಜಿ ಇಂದು ಶಿವಮೊಗ್ಗದ ಚಂದ್ರಶೇಖರನ್ ನಿವಾಸಕ್ಕೆ ಭೇಟಿ ನೀಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ವಿರೋಧಿಸಿ ಆತ್ಮಹತ್ಯೆ ಗೆ ಶರಣಾಗಿದ್ದ ಚಂದ್ರಶೇಖರನ್ ಕುಟುಂಬಕ್ಕೆ ಪ್ರಣವಾನಂದ ಸ್ವಾಮೀಜಿ ಸಾಂತ್ವಾನ ಹೇಳಿದರು.ನಂತರ ಪತ್ರಿಕಾ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ , ನಾರಾಯಣಗುರು ಪೀಠ ಈಡಿಗ ಸಮಾಜದ ಪರವಾಗಿ ಸಾಂತ್ವನ ಹೇಳಲು ಬಂದಿದ್ದೇನೆ.ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದ ಹಿಂದೆ ಪ್ರಭಾವಿ ಬಲಶಾಲಿಗಳಿದ್ದಾರೆ. 183 ಕೋಟಿ ಹಣ ಬೇರೆ ರಾಜ್ಯದ ಕಂಪನಿಗಳ ಖಾತೆಗೆ ವರ್ಗಾವಣೆಯಾಗಿದೆ ಆ ಕಂಪನಿಗಳ ಮಾಲೀಕರಿಗೂ ರಾಜ್ಯದ ರಾಜಕೀಯ ಮಹಾನ್ ನಾಯಕರುಗಳಿಗೆ ಇರುವ ಸಂಬಂಧ ಏನು ಇದೆಲ್ಲವೂ ಸಹ ತನಿಖೆ ಆಗಬೇಕು ಎಂದರು.40% ಕಮೀಷನ್ ವಿರುದ್ಧವಾಗಿ ಬಂದ ಈ ಸರ್ಕಾರ ಈಗ ಎಷ್ಟು ಪರ್ಸಂಟೇಜ್ ಕಮೀಷನ್ ಸರ್ಕಾರ ಎಂದು ಹೇಳಬೇಕಿದೆ. ಒಂದು ನಿಗಮದಲ್ಲಿ ಅಧಿಕಾರಿಗಳು ಪಿನ್ ಬದಲಾವಣೆ ಮಾಡಬೇಕೆಂದರೆ ಆ ಇಲಾಖೆಯ ಸಚಿವರ ಅನುಮತಿ ಬೇಕಾಗುತ್ತದೆ ಹಾಗಿದ್ದಲ್ಲಿ ಇಷ್ಟು ದೊಡ್ಡ ಮಟ್ಟದ ಹಣ ವರ್ಗಾವಣೆಯಾಗಿದೆ ಎಂದರೆ ಸಚಿವರ ಅನುಮತಿ ಇಲ್ಲದೆ ಆಗಿಲ್ಲ ಆದ್ದರಿಂದ ಕೂಡಲೆ ಸಚಿವ ನಾಗೇಂದ್ರರನ್ನು ಸರ್ಕಾರ ಕೈಬಿಡಬೇಕು ಎಂಬುದು ಆಗ್ರಹವಾಗಿದೆ ಎಂದರು.