ನಿಗಮದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ

ಚಿತ್ರದುರ್ಗ,ಏ.೮; ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಎಲ್ಲ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಮತಾ ಹೇಳಿದರು.
 ನಗರದ ಪತ್ರಿಕಾ ಭವನದಲ್ಲಿ ಬುಧವಾರ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಅಂಗವಾಗಿ “ಪರಿವರ್ತನಾ ತಿಂಗಳು” ಆಚರಣೆ, ರಸ್ತೆ ಬದಿ ಕುಟೀರ ಯೋಜನೆ ಫಲಾನುಭವಿಗಳಿಗೆ ಸ್ವಚ್ಛತೆ, ಆರ್ಥಿಕ ಶಿಸ್ತು ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ  ಒಂದು ದಿನದ ಕಾರ್ಯಗಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 ಮಾರ್ಚ್ 14 ರಿಂದ ಏಪ್ರಿಲ್ 14ರವರೆಗೆ ಪರಿವರ್ತನಾ ತಿಂಗಳು ಆಚರಣೆಯನ್ನು ಇಲಾಖೆಯ ವಿವಿಧ ವಿಭಾಗಗಳಲ್ಲಿ ಮಾಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆ ಮುಂತಾದ ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅರ್ಥ ಪೂರ್ಣವಾಗಿ ಕಾರ್ಯಕ್ರಮಗಳನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
 ರಸಪ್ರಶ್ನೆ, ಚರ್ಚಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಸೇರಿದಂತೆ ಇತರೆ ಸ್ಪರ್ಧೆಗಳನ್ನು  ಏರ್ಪಡಿಸುವುದರ ಮೂಲಕ ಅಂಬೇಡ್ಕರ್ ಅವರ ಜೀವನ ಮತ್ತು ಭಾರತ ಸಂವಿಧಾನದ ಬಗ್ಗೆ ವಿವಿಧ ವಿಚಾರಧಾರೆಗಳನ್ನು ಎಲ್ಲಾ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಜನಾಂಗದವರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಮುಖಂಡ ಎನ್. ಪ್ರಕಾಶ್ ಮಾತನಾಡಿ, ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಅನೇಕ ಸೌಲಭ್ಯಗಳು ಮತ್ತು ಸವಲತ್ತುಗಳು ದೊರೆಯುತ್ತಿವೆ ಅವುಗಳನ್ನು ಸೂಕ್ತ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
 ಸ್ವಚ್ಛತೆ, ಆರ್ಥಿಕ ಶಿಸ್ತು ಮತ್ತು ವ್ಯಕ್ತಿತ್ವ ವಿಕಾಸನ ಈ ಮೂರು ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯವಿದೆ ಎಂದು   ಸಂಪನ್ಮೂಲ ವ್ಯಕ್ತಿ ಟಿ.ಬಿ.ಶಿವಲಿಂಗಪ್ಪ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನ್‍ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ರಂಗಸ್ವಾಮಿ, ಮುಖಂಡರಾದ ಬಿ.ಟಿ.ಚಿದಾನಂದ ಮೂರ್ತಿ, ಕಣ್ಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ವಿವರ: ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಬುಧವಾರ ಡಾ. ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಅಂಗವಾಗಿ “ಪರಿವರ್ತನಾ ತಿಂಗಳು” ಆಚರಣೆ, ರಸ್ತೆ ಬದಿ ಕುಟೀರ ಯೋಜನೆ ಫಲಾನುಭವಿಗಳಿಗೆ ಸ್ವಚ್ಛತೆ, ಆರ್ಥಿಕ ಶಿಸ್ತು ಮತ್ತು ವ್ಯಕ್ತಿತ್ವ ವಿಕಸನದ ಕುರಿತು ಒಂದು ದಿನದ ಕಾರ್ಯಗಾರವನ್ನು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಮತಾ ಉದ್ಘಾಟಿಸಿದರು.