ನಿಗದಿಯಂತೆ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಚುನಾವಣೆ

ನವದೆಹಲಿ, ಡಿ 28-ಮುಂದಿನ ವರ್ಷ ನಿಗದಿಯಂತೆ ವಿವಿಧ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಆರೋರಾ ತಿಳಿಸಿದ್ದಾರೆ.
ಮಾರಕ ಕೊರೊನಾ ನಡುವೆಯೂ ಬಿಹಾರ ವಿಧಾನಸಭೆಗೆ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿದೆ. ಈಗ ಮುಂದಿನ ವರ್ಷ ಕೆಲ ರಾಜ್ಯಗಳಲ್ಲಿ ಚುನಾವಣೆ ನಡೆಸಲು ಮುಂದಾಗಿದೆ.
ದೆಹಲಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಮತದಾನ ಶೇ. 57.34 ಮತದಾನವಾಗಿತ್ತು.2015 ರ ಚುನಾವಣೆಯಲ್ಲಿ ದಾಖಲಾಗಿದ್ದ 56.8ಕ್ಕಿಂತಲೂ ಹೆಚ್ವಾಗಿತ್ತು. ಪುರುಷರಿಗಿಂತಲೂ ಮಹಿಳೆಯರು ಹೆಚ್ಚಿನ‌‌ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದರು‌ ಎಂದರು.
ಮುಂದಿನ ವರ್ಷ ಚುನಾವಣೆ ನಡೆಯಬೇಕಿರುವ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಪುದುಚೇರಿಗಳಲ್ಲಿಯೂ ಮತಗಟ್ಟೆಗಳ ಸಂಖ್ಯೆ ಸುಮಾರು 28,000ದಷ್ಟು ಹೆಚ್ಚಾಗುವ ಸಾಧ್ಯತೆ ಎಂದು ಅವರು‌ ಸುಳಿವು ನೀಡಿದರು.

ಚುನಾವಣೆ ನಡೆಯಬೇಕಿರುವ ಇತರೆ ರಾಜ್ಯಗಳ ವಿವರಗಳನ್ನು ಕಲೆ ಹಾಕಲಾಗುತ್ತಿದೆ ಎಂದ ಅವರು, ಕೋವಿಡ್‌ ಪರಿಸ್ಥಿತಿಯ ನಡುವೆಯೂ ಚುನಾವಣೆ ನಡೆಸುವ ತೀರ್ಮಾನವನ್ನು ಆಯೋಗ ಕಳೆದ ಆಗಸ್ಟ್‌ ತಿಂಗಳು ಕೈಗೊಂಡಿತ್ತು ಎಂದು‌ ಹೇಳಿದರು.

ಆಯೋಗದ ಬಳಿ ಲಭ್ಯವಿರುವ ಮಾಹಿತಿ ಪ್ರಕಾರ, ಬಿಹಾರದಲ್ಲಿ ಪ್ರಚಾರದ ವೇಳೆ ಕೋವಿಡ್‌ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ಆಯೋಜಕರ ವಿರುದ್ಧ ಸುಮಾರು 156 ಪ್ರಕರಣ ದಾಖಲಿಸಲಾಗಿದೆ ಎಂದು ಅವರು ವಿವರಿಸಿದರು.