ನಿಗದಿತ ದರಕ್ಕೆ ರಸಗೊಬ್ಬರ ಮಾರಾಟ- ಬಿ.ಶ್ರೀನಿವಾಸಲು

ಜಗಳೂರು.ಏ.೧೮: ನಿಗದಿತ ದರಕ್ಕೆ ರಸಗೊಬ್ಬರ ಮಾರಾಟ ಮಾಡಲು ಜಂಟಿ ಕೃಷಿ ನಿರ್ದೇಶಕರು ಸೂಚಿಸಿದ್ದು, ಅದರಂತೆಯೇ ತೀವ್ರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ರೈತರಿಗೆ ಆರ್ಥಿಕ ಹೊರೆಯಾಗದಂತೆ ಸಹಕಾರಿ ಸಂಘ ಹಾಗೂ ಖಾಸಗಿ ಗೊಬ್ಬರ ಮಾರಾಟಗಾರರಿಗೆ ಆದೇಶ ನೀಡಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸಲು ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ಶಿವಾನಂದಪ್ಪರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇಲಾಖೆ ವರದಿ ಮಂಡಿಸಿ ಅವರು ಮಾತನಾಡಿದರು. ಕಳೆದ ಬಾರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ವಾಡಿಕೆಗಿಂತ ಹೆಚ್ಚಿನ ಮಳೆ ಬಂದಿದೆ. 50 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಕಳೆದ ವರ್ಷ ಬಿತ್ತನೆ ಮಾಡಲಾಗಿತ್ತು. 5480 ಹೆಕ್ಟೇರ್‌ನಲ್ಲಿ ಹಿಂಗಾರು ಬಿತ್ತನೆ ಮಾಡಲಾಗಿದ್ದು, ಯಾವುದೇ ನಷ್ಟವಾಗದೆ ಉತ್ತಮ ಬೆಳೆ ಬಂದಿದೆ. ಕಳೆದ ಬಾರಿ ವಾಡಿಕೆಗಿಂತ ಶೇ.47ರಷ್ಟು ಹೆಚ್ಚು ಮಳೆಯಾಗಿ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಉತ್ತಮ ಬೆಳೆಯಾಗಿದೆ. 2021-21ನೇ ಸಾಲಿನಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ರೈತರಿಗೆ ಖುಷಿ ತರಲಿದೆ. ಇನ್ನೇನು ಮುಂಗಾರು ಪ್ರಾರಂಭವಾಗಲಿದ್ದು, ಈ ಭಾಗದಲ್ಲಿ ಮೆಕ್ಕೆಜೋಳ ಮತ್ತು ಹತ್ತಿ ಮುಂಗಾರು ಪ್ರಧಾನ ಬೆಳೆಗಳಾಗಿದ್ದು, ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಎಂಆರ್‌ಪಿ ಬೆಲೆಗೆ ಗೊಬ್ಬರ ಖರೀದಿ: ಖರೀದಿ ಈ ಹೇಳಿಕೆಗೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್.ಸಿದ್ದೇಶ್ ಮಧ್ಯಪ್ರವೇಶಿಸಿ ಮಾತನಾಡಿ ಕೇಂದ್ರ ರಸಗೊಬ್ಬರ ಖಾತೆ ಸಚಿವರು ಯಾವುದೇ ಗೊಬ್ಬರಗಳ ಬೆಲೆ ಏರಿಕೆ ಮಾಡಿಲ್ಲ. ಹೆಚ್ಚಿನ ಬೆಲೆ ನೀಡಬೇಕಾಗಿಲ್ಲ ಎಂದು ಹೇಳಿದ್ದರೂ ಸಹ ಗೊಬ್ಬರದ ಬೆಲೆಯಲ್ಲಿ ಕ್ವಿಂಟಾಲ್‌ವೊAದಕ್ಕೆ 300 -400 ರೂ. ದುಪ್ಪಟ್ಟಾಗಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ಆದ್ದರಿಂದ ರೈತರು ಹೊಸ ದರ ನೀಡಿ ಖರೀದಿಸಬೇಕೋ ಅಥವಾ ಹಳೆ ದರಕ್ಕೆ ಕೊಂಡುಕೊಳ್ಳಬೇಕೋ ಎಂಬ ಜಿಜ್ಞಾಸೆಯಿಂದ ಇರುವಂತಾಗಿದ್ದು, ಕೃಷಿ ಇಲಾಖೆಯವರು ಸೂಕ್ತ ಮಾರ್ಗದರ್ಶನ ನೀಡಬೇಕೆಂದಾಗ, ಕೃಷಿ ಅಧಿಕಾರಿಗಳು ರೈತರು ಎಂಆರ್‌ಪಿ ಬೆಲೆಗೆ ಖರೀದಿ ಮಾಡಬೇಕು ಅಲ್ಲದೆ , ಹೆಚ್ಚಿನ ದರಕ್ಕೆ ಬೇಡಿಕೆಯಿಟ್ಟರೆ ಇಲಾಖೆಯ ಗಮನಕ್ಕೆ ತಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗೊಬ್ಬರದ ಬೆಲೆ ಏರಿಕೆಯ ಕುರಿತು ಮೇಲಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಹೇಳಿದರು.ಜಿ.ಪಂ ಎಇಇ ಶಿವಕುಮಾರ್, ಪಿಡಬ್ಲುö್ಯಡಿ ಎಇಇ ರುದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ತಮ್ಮ ತಮ್ಮ ಇಲಾಖೆಯ ವರದಿಯನ್ನು ಮಂಡಿಸಿದರು.ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ಮಂಜುಳಾ ಶಿವಾನಂದಪ್ಪ, ಉಪಾಧ್ಯಕ್ಷ ಮುದೇಗೌಡ್ರು ಬಸವರಾಜ್ ಸೇರಿದಂತೆ ತಾಲ್ಲೂಕು ಮಟ್ಟದ ಅನುಷ್ಠಾನಾಧಿಕಾರಿಗಳು ಹಾಜರಿದ್ದರು.