ನಿಗದಿತ ಕಾಲಮಿತಿಯೊಳಗೆ ಗುರಿ ಸಾಧನೆಗೆ ಸೂಚನೆ

ಗದಗ24: ಸಕಾಲದಡಿ ಒಟ್ಟು 258 ಸೇವೆಗಳನ್ನು ವಿವಿಧ ಇಲಾಖೆಗಳಲ್ಲಿ ಒದಗಿಸಲಗುತ್ತಿದೆ. ಇವುಗಳಲ್ಲ 178 ಸೇವೆಗಳಿಗೆ ಮಾತ್ರ ಜಿಲ್ಲೆಯಲ್ಲಿ ಅರ್ಜಿಗಳು ಸ್ವೀಕೃತವಾಗಿದ್ದು ಬಾಕಿ ಉಳಿದ ಸೇವೆಗಳಿಗೂ ಸಕಾಲದಡಿ ಅರ್ಜಿಗಳನ್ನು ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇ ಮಾಡುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಕಾಲ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ವಿವಿಧ ಇಲಾಖೆಗಳ ವಿವಿಧ ಹಂತದ ಒಟ್ಟು 528 ಕಚೇರಿಗಳ ಪೈಕಿ 125 ಕಚೇರಿಗಳಲ್ಲಿ ಸಕಾಲದಡಿ ಅರ್ಜಿ ಸ್ವೀಕರಿಸದಿರುವದು ಗಮನಕ್ಕೆ ಬಂದಿದ್ದು ಅಂತಹ ಇಲಾಖೆಗಳ ಮುಖ್ಯಸ್ಥರು ಸಕಾಲದಡಿ ಅರ್ಜಿಗಳ ಸ್ವೀಕಾರಕ್ಕೆ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಾ.ಕ.ರ.ಸಾ.ಸಂ. ಗದಗ ವಿಭಾಗದಲ್ಲಿ ಅರ್ಜಿ ಸ್ವೀಕರಿಸಿ ನಿಗದಿತ ಕಾಲಮಿತಿಯೊಳಗೆ ವಿಲೇ ಮಾಡದೇ ಇರುವ ಐದುಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇದ್ದು ಇದರಿಂದ ಜಿಲ್ಲೆಯ ಸಕಾಲ ಪ್ರಗತಿ ಕುಂಠಿತವಾಗಿದ್ದು ಇನ್ನೆರಡು ದಿನದಲ್ಲಿ ಅರ್ಜಿಗಳ ವಿಲೇಗೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು. ಅದೇ ರೀತಿ ಆರೋಗ್ಯ ಇಲಾಖೆಯಲ್ಲಿರುವ 59 ಕಚೇರಿಗಳ ಪೈಕಿ 35 ಕಚೇರಿಗಳಲ್ಲಿ ಮಾತ್ರ ಸಕಾಲದಡಿ ಅರ್ಜಿ ಸ್ವೀಕೃತವಾಗಿದ್ದು ಉಳಿದ ಕಚೇರಿಗಳಲ್ಲಿಯೂ ಸಕಾಲದಡಿ ಅರ್ಜಿ ಸ್ವೀಕರಿಸುವಂತೆ ಸೂಚಿಸಿದರು. ಶಿಕ್ಷಣ ಇಲಾಖೆಯ 30 ಕಚೇರಿಗಳ ಪೈಕಿ 21 ಕಚೇರಿಗಳಲ್ಲಿ ಇವರೆಗೂ ಅರ್ಜಿ ಸ್ವೀಕೃತವಾಗಿರುವುದಿಲ್ಲ ಇದರಿಂದ ಜಿಲ್ಲೆಯ ಪ್ರಗತಿ ಕುಂಠಿತವಾಗುತ್ತಿದ್ದು ಇದೇ ರೀತಿ ಮುಂದುವರೆದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವದು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ, ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿ ಜಿಲ್ಲೆಯ ಆಯ್ದ ಇಲಾಖೆಗಳಲ್ಲಿ ಜಿಲ್ಲಾ, ರಾಜ್ಯ ಹಾಗೂ ಕೇಂದ್ರ ವಲಯಗಳಲ್ಲಿ ಒಟ್ಟಾರೆ 2021 ಫೆಬ್ರುವರಿ ಮಾಹೆಯ ಅಂತ್ಯದವರೆಗೆ 14365.56 ಲಕ್ಷ ರೂ ಅನುದಾನ ನಿಗದಿಪಡಿಸಿದ್ದು, ಈವರೆಗೆ ಒಟ್ಟಾರೆ 7663.75 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಒಟ್ಟಾರೆ 6772 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ. ಬಿಡುಗಡೆಯಾದ ಅನುದಾನದಲ್ಲಿ ಶೇ.88 ರಷ್ಟು ಆರ್ಥಿಕ ಪ್ರಗತಿ ಸಾಧಿಸಿದಂತಾಗಿದೆ. 101170 ನಿಗದಿಪಡಿಸಿದ ಫಲಾನುಭವಿಗಳ ಪೈಕಿ 42232 ಫಲಾನುಭವಿಗಳು ಸೌಲಭ್ಯ ಪಡೆದಿರುತ್ತಾರೆ. ಹಾಗೂ 235 ಕಾಮಗಾರಿಗಳನ್ನು ಕೈಗೊಂಡಿದ್ದು ಆ ಪೈಕಿ 163 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶಿಷ್ಟಾಚಾರ ಕುರಿತು ಜರುಗಿದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ ಅವರು ಮಾತನಾಡಿ, ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಯಾವುದೇ ಕಾಮಗಾರಿ, ಕಾರ್ಯಕ್ರಮಗಳನ್ನು ಆಯೋಜಿಸುವ ಮುನ್ನ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮುದ್ರಣಕ್ಕೂ ಮುನ್ನ ಜಿಲ್ಲಾಡಳಿತದಿಂದ ಅನುಮೋದನೆ ಪಡೆಯಬೇಕು. ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಗೆ ಅವಕಾಶ ನೀಡದಂತೆ ಸೂಚಿಸಿದರು. ಒಂದು ವೇಳೆ ಶಿಷ್ಟಾಚಾರ ಉಲ್ಲಂಘನೆ ಕುರಿತು ದೂರಗಳು ಬಂದಲ್ಲಿ ಸಂಬಂಧಿಸಿದ ಇಲಾಖಾ ಮುಖ್ಯಸ್ಥರನ್ನು ನೆರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಗದಗ-ಬೆಟಗೇರಿ ನಗರ ಸಭೆ ಪೌರಯುಕ್ತ ರಮೇಶ ಜಾದವ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಅನೀಲಕುಮಾರ ಮುದ್ದಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.