ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ: ಪಾಟೀಲ


ಧಾರವಾಡ,ಜ.8: ಜಿಲ್ಲಾ ಪಂಚಾಯತಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಇಲ್ಲಿಯವರೆಗೆ ಕೈಗೊಂಡಿರುವ ಕಾಮಗಾರಿ, ಯೋಜನೆಗಳ ಅನುಷ್ಠಾನದ ಕುರಿತು ವರದಿಯನ್ನು ನೀಡಬೇಕು ಮತ್ತು ಫೆಬ್ರವರಿ ಅಂತ್ಯದೊಳಗೆ ಕ್ರಿಯಾಯೋಜನೆಯಲ್ಲಿ ಅನುಮೊದಿಸಿದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ವಿಜಯಲಕ್ಷ್ಮಿ ಪಾಟೀಲ ಹೇಳಿದರು.
ಅವರು ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜರುಗಿದ ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಾವುದೇ ಇಲಾಖೆಯ ಕಾಮಗಾರಿ, ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಅಲ್ಲಿನ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು. ಸರಕಾರ ಹಾಗೂ ಜಿಲ್ಲಾ ಪಂಚಾಯತಿಯಿಂದ ಬಿಡುಗಡೆಯಾಗುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿ, ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಶಿವಾನಂದ ಕರಿಗಾರ ಮಾತನಾಡಿ, ಕ್ರಿಯಾಯೋಜನೆಯಲ್ಲಿ ಅನುಮೋದಿಸಿದ ಕಾಮಗಾರಿಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಹಂಚಿಕೆಯಾದ ಅನುದಾನ ಬಳಕೆ ಮಾಡಿಕೊಂಡು ಗುರಿ ಸಾಧಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ. ಅವರು ಮಾತನಾಡಿ, ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಕಳೆದ ಎರಡು-ಮೂರು ತಿಂಗಳಲ್ಲಿ ಸುಮಾರು 6 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿ, ಉದ್ಯೋಗ ನೀಡಲಾಗಿದೆ. ಪ್ರತಿ ತಾಲೂಕಿನ ಇ.ಓ, ಬಿ.ಇ.ಓ ಹಾಗೂ ಇತರ ಅಧಿಕಾರಿಗಳಿಗೆ ಅವರ ತಾಲೂಕಿನ ಯೋಜನೆ, ಕಾಮಗಾರಿಗಳ ಪ್ರಗತಿ ಕುರಿತು ವರದಿ ಸಲ್ಲಿಸಲು ಸೂಚಿಸಲಾಗಿದೆ. ಎಲ್ಲ ಹಂತದ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರದ ನಿಯಮಾನುಸಾರ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ಸರಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ ಸದಸ್ಯರು, ತಾಲೂಕಾ ಪಂಚಾಯತ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಂಡು ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಎಸ್.ಎಂ.ಕುಂದೂರ ಸಭೆ ನಿರ್ವಹಿಸಿದರು. ಯೋಜನಾ ನಿರ್ದೇಶಕ ಬಿ.ಎಸ್. ಮುಗನೂರಮಠ ಸ್ವಾಗತಿಸಿದರು. ಮುಖ್ಯಯೋಜನಾಧಿಕಾರಿ ದೀಪಕ ಮಡಿವಾಳರ, ಡಿ.ಡಿ.ಪಿ.ಐ ಎಂ.ಎಲ್ ಹಂಚಾಟೆ, ಪಿ.ಆರ್.ಇ.ಡಿ ಯ ಕಾರ್ಯಪಾಲಕ ಇಂಜನೀಯರ ಮನೋಹರ ಮಂಡೊಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ, ಲೊಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜನೀಯರ ಎಸ್.ಬಿ.ಚೌಡಣ್ಣವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಶೆಟ್ಟರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ: ಧಾರವಾಡ ಜಿಲ್ಲಾ ಪಂಚಾಯತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ,ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಸ್ವಚ್ಛೋತ್ಸವ-ನಿತ್ಯೋತ್ಸವ ಕಾರ್ಯಕ್ರಮದಡಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ, ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರೌಢಶಾಲಾ ಮಕ್ಕಳಿಗಾಗಿ ತ್ಯಾಜ್ಯ ನಿರ್ವಹಣೆ ವಿಷಯ ಕುರಿತು ಆನ್ ಲೈನ್ ಮೂಲಕ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸೆಪ್ಟೆಂಬರ್ 16 ರಂದು ಸ್ಪರ್ಧೆ ನಡೆದಿತ್ತು, ಜಿಲ್ಲೆಯ ಪ್ರತಿಯೊಂದು ಗ್ರಾಮವು ಸ್ವಚ್ಛ, ಸುಂದರ, ಆರೋಗ್ಯಕರ ಮತ್ತು ತ್ಯಾಜ್ಯ ಮುಕ್ತವಾಗಿಸುವ ಉದ್ದೇಶದಿಂದ ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು, ಪಾಲಕರಲ್ಲಿ ಜಾಗೃತಿ ಮೂಡಿಸಲು ಈ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ 141 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಧಾರವಾಡ ಗ್ರಾಮೀಣ ವೀರಾಪೂರ ಸರ್ಕಾರಿ ಪ್ರೌಢಶಾಲೆಯ ನಂದೀಶ ಮುರಗೋಡ, ದ್ವಿತೀಯ ಸ್ಥಾನವನ್ನು ಕಲಘಟಗಿಯ ತುಮರಿಕೊಪ್ಪ ಸೆಂಟ್ ಝೇವಿಯರ್ ಪ್ರೌಢಶಾಲೆಯ ಅಕ್ಷತಾ ಉದೋಜಿ ಹಾಗೂ ತೃತೀಯ ಸ್ಥಾನವನ್ನು ನವಲಗುಂದ ತಾಲೂಕಿನ ಮೊರಬಗ್ರಾಮದ ವಾಯ್.ವಿ.ಎಮ್. ಪ್ರೌಢಶಾಲೆಯ ಮಧುಮತಿ ಸುತಗಟ್ಟಿ ಪಡೆದುಕೊಂಡಿದ್ದರು.
ವಿಜೇತರಿಗೆ ಪ್ರಮಾಣಪತ್ರದೊಂದಿಗೆ ಪ್ರಥಮ ಬಹುಮಾನ ರೂ. 3000/- , ದ್ವಿತೀಯ ಬಹುಮಾನ ರೂ. 2000/- ಹಾಗೂ ತೃತೀಯ ಬಹುಮಾನ ರೂ. 1000/- ಮೊತ್ತದ ಡಿ.ಡಿ.ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಮ್.ಎಲ್.ಹಂಚಾಟೆ, ಇತರರು ಉಪಸ್ಥಿತರಿದ್ದರು.